ಪಾಟ್ನಾ: Biharದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲೊಂದು ಬೆಂಕಿಗಾಹುತಿಯಾಗಿದೆ. ಅಗ್ನಿಯ ಕೆನ್ನಾಲಿಗೆಗೆ ಒಂದು ಬೋಗಿ ಸಂಪೂರ್ಣ ಕರಕಲಾಗಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬೆಂಕಿ ನಂದಿಸಲು ರೈಲ್ವೆ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸುತ್ತಿರುವ ದೃಶ್ಯಗಳು ಹಾಗೂ ಬೋಗಿಯಿಂದ ದಟ್ಟ ಹೊಗೆ ಆವರಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪಾಟ್ನಾಕ್ಕೆ ಹೊರಡಲು ಸಿದ್ಧವಾಗಿದ್ದ ವೇಳೆ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿಯಂತೆ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಪ್ರಯಾಣಿಕರು ಬೆಂಕಿಯ ದೃಶ್ಯ ನೋಡಿ ಗಾಬರಿಗೊಂಡಿದ್ದರು.
ಇದಕ್ಕೂ ಮೊದಲು ಭಾನುವಾರ Madhya Pradeshದ ರತ್ಲಂನಲ್ಲಿ ದೆಹಲಿಗೆ ತೆರಳುತ್ತಿದ್ದ Rajdhani Express ರೈಲಿನ ಎಸಿ ಕೋಚ್‌ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದರ ಬೆನ್ನಲ್ಲೇ ಇದೀಗ ಬಿಹಾರದಲ್ಲೂ ರೈಲು ಬೆಂಕಿ ಪ್ರಕರಣ ವರದಿಯಾಗಿದೆ. ಆ ಘಟನೆಯಲ್ಲಿ ಬಿ-1 ಕೋಚ್ ಹಿಂಭಾಗದಲ್ಲಿದ್ದ ಲಗೇಜ್-ಕಮ್-ಗಾರ್ಡ್ ವ್ಯಾನ್‌ಗೂ ಬೆಂಕಿ ತಗುಲಿತ್ತು. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಘಟನೆಯ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು.