ಬೆಂಗಳೂರು: ರಾಜ್ಯ ವಿಧಾನಸಭೆ ಡಿಜಿಟಲ್ ಪರಿವರ್ತನೆಯತ್ತ ಮಹತ್ವದ ಹೆಜ್ಜೆ ಇಡುತ್ತಿದ್ದು, ಜುಲೈ ಮಳೆಗಾಲದ ಅಧಿವೇಶನದಿಂದಲೇ ಕಾಗದರಹಿತ ಕಾರ್ಯವೈಖರಿ ಜಾರಿಗೆ ಬರಲಿದೆ. ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಇನ್ನುಮುಂದೆ ಬಯೋಮೆಟ್ರಿಕ್ ಸೌಲಭ್ಯ ಹೊಂದಿರುವ ಐಪ್ಯಾಡ್‌ಗಳ ಮೂಲಕ ವಿಶೇಷ ಅಪ್ಲಿಕೇಶನ್ ಬಳಸಲಿದ್ದಾರೆ.
ಶಾಸಕರಿಗೆ ವಿತರಿಸಲಾಗುತ್ತಿದ್ದ ಮಸೂದೆಗಳು ಹಾಗೂ ಇತರ ದಾಖಲೆಗಳ ಕಾಗದದ ಬಂಡಲ್‌ಗಳಿಗೆ ಇದರಿಂದ ತೆರೆ ಬೀಳಲಿದೆ. ಈ ಡಿಜಿಟಲ್ ವ್ಯವಸ್ಥೆ ಜಾರಿಗೆ ಸಂಬಂಧಿಸಿ ಕಳೆದ ತಿಂಗಳು ವಿಧಾನಸಭೆ ಮತ್ತು ವಿಧಾನ ಪರಿಷತ್ತು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA) ಯೋಜನೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿವೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಯೋಜನೆಯ ಒಟ್ಟು ವೆಚ್ಚ ಸುಮಾರು 60 ಕೋಟಿ ರೂ. ಆಗಿದ್ದು, ಅದರಲ್ಲೂ ರಾಜ್ಯ ಸರ್ಕಾರವು 40 ಶೇಕಡಾ ವೆಚ್ಚವನ್ನು ಭರಿಸಲಿದೆ ಎಂದು ತಿಳಿಸಿದರು.
ಎರಡೂ ಸದನಗಳನ್ನು ಸಂಪೂರ್ಣ ಡಿಜಿಟಲ್ ರೂಪಕ್ಕೆ ತರಲು ಉದ್ದೇಶಿಸಿದ್ದೇವೆ. ಕಾರ್ಯಸೂಚಿ, ನಕ್ಷತ್ರ ಹಾಕಿದ ಪ್ರಶ್ನೋತ್ತರಗಳು, ಮಸೂದೆಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಇ-ಫಾರ್ಮ್ಯಾಟ್ ಮೂಲಕ ಸದಸ್ಯರಿಗೆ ರವಾನಿಸಲಾಗುತ್ತದೆ. ಇದರಿಂದ ಮಾಹಿತಿ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ ಎಂದು ಅವರು ಹೇಳಿದರು. ಬಳಕೆದಾರ ಸ್ನೇಹಿ ಸಾಫ್ಟ್‌ವೇರ್ ಈ ವ್ಯವಸ್ಥೆಯಲ್ಲಿ ಅಳವಡಿಸಲಾಗುತ್ತದೆ ಎಂದರು.
ಈ ಯೋಜನೆಯಿಂದ ಪ್ರಸ್ತುತ ಎದುರಾಗುತ್ತಿರುವ ಅನೇಕ ಆಡಳಿತಾತ್ಮಕ ವೆಚ್ಚಗಳು ಕಡಿಮೆಯಾಗಲಿವೆ. ದಾಖಲೆಗಳು ಕಳೆದುಹೋಗುವ ಸಾಧ್ಯತೆಯೂ ಇರುವುದಿಲ್ಲ. ಎಲ್ಲಾ ಶಾಸಕರಿಗೂ ಈ ತಂತ್ರಜ್ಞಾನ ಬಳಕೆಯ ಕುರಿತು ತರಬೇತಿ ನೀಡಲಾಗುತ್ತದೆ. ಈಗಾಗಲೇ ಹೆಚ್ಚಿನ ಸದಸ್ಯರು ಸ್ಮಾರ್ಟ್‌ಫೋನ್ ಬಳಸುತ್ತಿರುವುದರಿಂದ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟವಾಗುವುದಿಲ್ಲ ಎಂದು ಖಾದರ್ ಅಭಿಪ್ರಾಯಪಟ್ಟರು.
ಸದನದಲ್ಲಿ ಜನಸಂಬಂಧಿ ವಿಚಾರಗಳು ಹಾಗೂ ಅಗತ್ಯ ಮಾಹಿತಿಗಾಗಿ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ. ಹೊಸ ಡಿಜಿಟಲ್ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಲು ಜಾಮರ್‌ಗಳನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷರಾಗಿದ್ದ ಅವಧಿಯಲ್ಲೇ ಈ ಯೋಜನೆಗೆ ಸಂಬಂಧಿಸಿದ ಪ್ರಸ್ತಾಪ ಮುಂದಿಟ್ಟಲಾಗಿತ್ತು. ಕೇಂದ್ರದ NeVA ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕೋ ಅಥವಾ ರಾಜ್ಯದದೇ ಪ್ರತ್ಯೇಕ ಸಾಫ್ಟ್‌ವೇರ್ ರೂಪಿಸಬೇಕೋ ಎಂಬ ಚರ್ಚೆ ನಡೆದಿತ್ತು. ಇದೀಗ ಡಿಜಿಟಲ್ ವಿಧಾನಸಭೆ ಯೋಜನೆ ಜಾರಿಗೆ ಬರಲು ಸದನ ಸಜ್ಜಾಗಿದೆ.