ರಾಯಚೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮದುವೆ ಆಹ್ವಾನ ಪತ್ರ ಕಳುಹಿಸಿದ್ದ ರಾಯಚೂರು (Raichuru) ಜಿಲ್ಲೆಯ ಯುವಕನಿಗೆ ಇದೀಗ ಪ್ರಧಾನಿ ಕಚೇರಿಯಿಂದ ಮದುವೆ ಶುಭಾಶಯ ಪತ್ರ ಬಂದಿದೆ, ಇದರಿಂದ ಯುವಕ ಸಂತೋಷ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು (Sindhanuru) ತಾಲ್ಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಅವರು ಪ್ರಧಾನಿ ಮೋದಿಗೆ ತಮ್ಮ ಮದುವೆ ಆಹ್ವಾನ ಪತ್ರವನ್ನು ಕಳುಹಿಸಿದ್ದರು. ಇದೀಗ ಪ್ರಧಾನಿ ಕಚೇರಿಯಿಂದ ನವ ದಂಪತಿಗೆ ಶುಭಾಶಯ ಸಂದೇಶ ಬಂದಿದೆ. ಆಹ್ವಾನಕ್ಕೆ ಪ್ರತಿಕ್ರಿಯೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರು, ಮದುವೆ ಲಗ್ನ ಪತ್ರಿಕೆಯನ್ನು ಪೋಸ್ಟ್ ಮೂಲಕ ಕಳುಹಿಸಿ ಪ್ರಧಾನಿಗೆ ಆಹ್ವಾನ ನೀಡಿದ್ದರು.
ಏಪ್ರಿಲ್ 13ರಂದು ರಾಜೇಶ್ ನಾಯಕ್ ಹಾಗೂ ಸವಿತಾ ಅವರ ಮದುವೆ ನಡೆದಿದ್ದು, ಈಗ ನವಜೋಡಿಗೆ ಪ್ರಧಾನಿ ಮೋದಿ ಕಡೆಯಿಂದ ಶುಭಾಶಯ ಪತ್ರ ಬಂದಿದೆ. ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ ಕಳುಹಿಸಿದ ಈ ಪತ್ರವನ್ನು ಸ್ವೀಕರಿಸಿದ ರಾಜೇಶ್ ಅವರು ಸಂತೋಷ ವ್ಯಕ್ತಪಡಿಸಿ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.