ಬೆಂಗಳೂರು, ಮೇ 05: ನಗರದಲ್ಲಿ ಡ್ರಗ್ಸ್ ದಂಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ಪೊಲೀಸರು ಮತ್ತೆ ಬೃಹತ್ ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ₹14.75 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಂದಿನಿ ಲೇಔಟ್ ಹಾಗೂ ಯಶವಂತಪುರ ಠಾಣೆಗಳ ತಂಡಗಳು ಒಟ್ಟು 13.7 ಕೆಜಿ ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟಲ್ ಸೀಜ್ ಮಾಡಿವೆ.
ನಂದಿನಿ ಲೇಔಟ್‌ನಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೇರಳ ಮೂಲದ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಸೌಗೇಶ್ ಮತ್ತು ಅಲ್ತಾಫ್ ಎಂಬ ಆರೋಪಿಗಳಿಂದ ₹5.75 ಕೋಟಿ ಮೌಲ್ಯದ 5.7 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶದಿಂದ ತರಿಸಿದ ಈ ಡ್ರಗ್ಸ್ ಅನ್ನು ಸ್ಥಳೀಯರಿಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದರೆಂಬ ಮಾಹಿತಿ ಬಹಿರಂಗವಾಗಿದೆ. ಈಗಾಗಲೇ ಇವರ ಮೇಲೆ ಕೇರಳದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.
ಇನ್ನೊಂದೆಡೆ ಯಶವಂತಪುರ ಪೊಲೀಸರು ಅಂತರರಾಷ್ಟ್ರೀಯ ಡ್ರಗ್ ಜಾಲವನ್ನು ಪತ್ತೆಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ. ಸೈಯದ್ ಸುಹೇಲ್, ಮೊಹಮ್ಮದ್ ಸಮೀರ್, ಸಾದಿಕ್ ಪಾಷಾ ಹಾಗೂ ಮೊಹಮ್ಮದ್ ಹಕ್ ಬಂಧಿತರು. ಇವರಿಂದ ₹9 ಕೋಟಿ ಮೌಲ್ಯದ 8 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ವಿತರಿಸುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ. ಬಂಧಿತರಿಂದ ಕಾರು ಮತ್ತು ಐದು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿಯಾದ ಸುಹೇಲ್ ಹೊಸಕೋಟೆ ಠಾಣೆಯ ರೌಡಿಶೀಟರ್ ಆಗಿದ್ದು, ಈ ಹಿಂದೆ ಪೊಲೀಸ್ ಎನ್‌ಕೌಂಟರ್ ವೇಳೆ ಕಾಲಿಗೆ ಗುಂಡೇಟು ತಗುಲಿ ಬಂಧನಕ್ಕೊಳಗಾಗಿದ್ದನು. ಸದ್ಯ ಈ ಜಾಲದ ಹಿಂದಿರುವ ನೈಜೀರಿಯಾ ಮೂಲದ ಪೂರೈಕೆದಾರರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.