ನವದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ, ಇರಾನ್–ಅಮೆರಿಕ ಸಂಘರ್ಷ ಮತ್ತು ಜಾಗತಿಕ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಕಚ್ಚಾತೈಲ ದರಗಳ ನಡುವೆಯೇ ದೇಶದಲ್ಲಿ ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ವಿಶೇಷ ಭದ್ರತಾ ಪಡೆ (SPG) ಬಳಕೆ ಮಾಡುವ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತಗೊಳಿಸುವಂತೆ ಸೂಚನೆ ನೀಡಲಾಗಿದೆ.
ಮಿತವ್ಯಯ ಕ್ರಮಗಳ ಭಾಗವಾಗಿ ಇತ್ತೀಚಿನ ಗುಹಾವಾಟಿ ಮತ್ತು ವಡೋದರಾ ಪ್ರವಾಸಗಳಲ್ಲಿಯೂ ಕಡಿಮೆ ವಾಹನಗಳೊಂದಿಗೆ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಇದರ ಮೂಲಕ ಸರ್ಕಾರವೂ ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳಿಗೆ ಆದ್ಯತೆ ನೀಡುತ್ತಿದೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.
ಇದರ ಜೊತೆಗೆ, ಪ್ರಧಾನಿ ಭದ್ರತಾ ಕಾನ್ವಾಯ್‌ನಲ್ಲಿ ಬಳಸುವ ಕೆಲವು ವಿಶೇಷ ವಾಹನಗಳಿಗೆ ಎಲೆಕ್ಟ್ರಿಕ್ ಕಾರುಗಳ ಬಳಕೆಗೆ ಸಹ ಹಸಿರು ನಿಶಾನೆ ತೋರಲಾಗಿದೆ. ಇಂಧನ ಬಳಕೆಯನ್ನು ತಗ್ಗಿಸುವುದರ ಜೊತೆಗೆ ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತು ನೀಡುವತ್ತ ಸರ್ಕಾರ ಮುಂದಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ಪ್ರಧಾನಿ ಮೋದಿ ಭಾಷಣದ ಪ್ರತಿಗಳನ್ನು ಹಂಚಲಾಗಿತ್ತು. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಮಿತವ್ಯಯ ಕ್ರಮಗಳು ಮತ್ತು ಕಾರ್ಯಯೋಜನೆಗಳ ವಿವರ ಅದರಲ್ಲಿ ಒಳಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಯಯೋಜನೆಯಲ್ಲಿ ನಾಗರಿಕರು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು, ಅನಗತ್ಯ ಇಂಧನ ಬಳಕೆಯನ್ನು ತಪ್ಪಿಸಬೇಕು ಮತ್ತು ಅಗತ್ಯವಿಲ್ಲದ ಪ್ರಯಾಣಗಳನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಲಾಗಿದೆ. ಸಭೆಗಳು ಹಾಗೂ ಅಧಿಕೃತ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಆನ್‌ಲೈನ್ ಮೂಲಕ ನಡೆಸುವಂತೆ ಸೂಚಿಸಲಾಗಿದೆ.
ಪಶ್ಚಿಮ ಏಷ್ಯಾದ ಅಸ್ಥಿರ ಪರಿಸ್ಥಿತಿಯಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಒತ್ತಡದ ನಡುವೆಯೇ ಈ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ. ಆಡಳಿತದ ಕಾರ್ಯಕ್ಷಮತೆ ಮತ್ತು ಭದ್ರತಾ ಮಾನದಂಡಗಳನ್ನು ಉಳಿಸಿಕೊಂಡೇ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಪ್ರಾಯೋಗಿಕ ಮಿತವ್ಯಯ ಕ್ರಮಗಳನ್ನು ಅನುಸರಿಸಬೇಕು ಎಂಬುದು ಪ್ರಧಾನಿ ಮೋದಿ ಆಶಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಿರ್ಧಾರದ ಪರಿಣಾಮ ಈಗಾಗಲೇ ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಗೋಚರಿಸುತ್ತಿದ್ದು, ಅನೇಕ ನಾಯಕರು ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವತ್ತ ಮುಂದಾಗಿದ್ದಾರೆ.