ಬೆಂಗಳೂರು, ಮೇ.1: ಉತ್ತರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಮಂಡಳಿ ಮಹತ್ವದ ಸಿಹಿಸುದ್ದಿ ನೀಡಿದೆ. ಇದುವರೆಗೆ ‘ವಿಶೇಷ ರೈಲು’ಗಳಾಗಿ ತಾತ್ಕಾಲಿಕವಾಗಿ ಓಡುತ್ತಿದ್ದ ನಾಲ್ಕು ಪ್ರಮುಖ ರೈಲುಗಳನ್ನು ಇದೀಗ ಶಾಶ್ವತಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದರಿಂದ ಟಿಕೆಟ್ ದರದಲ್ಲಿ ಇಳಿಕೆ ಜೊತೆಗೆ ಪ್ರಯಾಣದ ವಿಶ್ವಾಸಾರ್ಹತೆ ಹೆಚ್ಚಲಿದೆ.
ಖಾಯಂಗೊಂಡ ರೈಲುಗಳ ವಿವರ:
ಸೊಲ್ಲಾಪುರ – ಕಲಬುರಗಿ ಡೆಮು (71435/71436): ಪ್ರತಿದಿನ ಸಂಚರಿಸುವ ಈ ರೈಲು ಗಾಣಗಾಪುರ ದತ್ತಾತ್ರೇಯ ಭಕ್ತರು ಮತ್ತು ದೈನಂದಿನ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ.
ದೌಂಡ್ – ಕಲಬುರಗಿ ಫಾಸ್ಟ್ ಪ್ಯಾಸೆಂಜರ್: ವಾರಕ್ಕೆ ಐದು ದಿನ (51301/51302) ಹಾಗೂ ಉಳಿದ ಎರಡು ದಿನ (51303/51304) ಸಂಚರಿಸುವ ಈ ಸೇವೆ ಈಗ ನಿಯಮಿತವಾಗಿ ಮುಂದುವರಿಯಲಿದೆ.
ಸೊಲ್ಲಾಪುರ – ಮುಂಬೈ (ಲೋಕಮಾನ್ಯ ತಿಲಕ್) ಎಕ್ಸ್‌ಪ್ರೆಸ್ (11303/11304): ಕಲಬುರಗಿ, ಹುಮ್ನಾಬಾದ್, ಬೀದರ್ ಮತ್ತು ಭಾಲ್ಕಿ ಮೂಲಕ ಸಂಚರಿಸುವ ಈ ರೈಲು ಕಲ್ಯಾಣ ಕರ್ನಾಟಕದಿಂದ ಮುಂಬೈಗೆ ನೇರ ಸಂಪರ್ಕ ಕಲ್ಪಿಸುತ್ತದೆ.
ಸೊಲ್ಲಾಪುರ – ಅನಕಾಪಲ್ಲಿ ಎಕ್ಸ್‌ಪ್ರೆಸ್ (11313/11314): ವಾಡಿ, ಯಾದಗಿರಿ ಮತ್ತು ರಾಯಚೂರು ಮಾರ್ಗವಾಗಿ ಸಾಗುವ ಈ ರೈಲು ಆಂಧ್ರಪ್ರದೇಶದ ವಿಜಯವಾಡ ಹಾಗೂ ಕರಾವಳಿ ಪ್ರದೇಶಗಳಿಗೆ ಸಂಪರ್ಕ ಒದಗಿಸುತ್ತದೆ.
ಪ್ರಯಾಣಿಕರಿಗಾಗುವ ಲಾಭಗಳು:
ಟಿಕೆಟ್ ದರ ಇಳಿಕೆ: ‘ವಿಶೇಷ ರೈಲು’ ಸ್ಥಾನಮಾನ ತೆರವಾಗುವುದರಿಂದ ಹೆಚ್ಚುವರಿ ಶುಲ್ಕ ರದ್ದುಪಡಿ, ಸಾಮಾನ್ಯ ದರ ಜಾರಿಗೆ ಬರುತ್ತದೆ.
ಸ್ಥಿರ ಸೇವೆ: ರೈಲು ರದ್ದುಪಡುವ ಭೀತಿ ಕಡಿಮೆಯಾಗಿದ್ದು, ಪ್ರಯಾಣಿಕರು ಮುಂಗಡ ಟಿಕೆಟ್‌ಗಳನ್ನು ನಿಶ್ಚಿಂತೆಯಿಂದ ಬುಕ್ ಮಾಡಬಹುದು.
ಅಂತರರಾಜ್ಯ ಸಂಪರ್ಕ: ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಕ್ಕೆ ತೆರಳುವ ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ಒದಗಲಿದೆ.