ನವದೆಹಲಿ: ಡಚ್ ಕ್ರೂಸ್ ಹಡಗು MV Hondiusನಲ್ಲಿ ಕಾಣಿಸಿಕೊಂಡಿರುವ ಮಾರಕ ಹಾಂಟಾವೈರಸ್ ಸೋಂಕಿನ ನಡುವೆ, ಹಡಗಿನಲ್ಲಿ ಇಬ್ಬರು ಭಾರತೀಯ ಮೂಲದ ಸಿಬ್ಬಂದಿ ಇದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಹೌದು.. MV Hondius ಹಡಗಿನಲ್ಲಿ ದೃಢಪಟ್ಟಿರುವ ಹಾಂಟಾವೈರಸ್ ಪ್ರಕರಣಗಳು ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿಸಿದ್ದು, ಇದುವರೆಗೆ ಐದು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ಈ ಬೆಳವಣಿಗೆ ವಿಶ್ವದಾದ್ಯಂತ ಚರ್ಚೆಗೆ ಕಾರಣವಾಗಿದ್ದು, Oceanwide Expeditions ಸಂಸ್ಥೆ ನಿರ್ವಹಿಸುತ್ತಿರುವ ಈ ಸಂಶೋಧನಾ ಕ್ರೂಸ್ ಹಡಗಿನಲ್ಲಿ ಕನಿಷ್ಠ ಇಬ್ಬರು ಭಾರತೀಯರು ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಹಡಗು ಏಪ್ರಿಲ್ 1ರಂದು ಉಶುವಾಯಾದಿಂದ ಪ್ರಯಾಣ ಆರಂಭಿಸಿತ್ತು. ಮೇ 10ರಂದು ಕೆನರಿ ದ್ವೀಪಗಳಿಗೆ ತಲುಪುವ ಸಾಧ್ಯತೆ ಇದ್ದು, ಆರಂಭದಲ್ಲಿ ಸುಮಾರು 150 ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 28 ರಾಷ್ಟ್ರಗಳ ಜನರು ಹಡಗಿನಲ್ಲಿ ಇದ್ದರು.
ಏಪ್ರಿಲ್ 24ರಂದು ಕೆಲ ಪ್ರಯಾಣಿಕರು ಸೆಂಟ್ ಹೆಲಿನಾ ದ್ವೀಪದಲ್ಲಿ ಇಳಿದಿದ್ದರು. ಪ್ರಯಾಣಿಕರ ಪಟ್ಟಿಯಲ್ಲಿ ಭಾರತ, ಅಮೆರಿಕಾ, ಬ್ರಿಟನ್, ಫಿಲಿಪೈನ್ಸ್, ಸ್ಪೇನ್, ಜರ್ಮನಿ, ಕೆನಡಾ ಮತ್ತು ನೆದರ್‌ಲ್ಯಾಂಡ್ಸ್ ಸೇರಿದಂತೆ ಹಲವು ದೇಶಗಳ ನಾಗರಿಕರು ಸೇರಿದ್ದರು ಎಂದು ತಿಳಿದುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ಪ್ರಕಾರ, ಶಂಕಿತ ಎಂಟು ಪ್ರಕರಣಗಳಲ್ಲಿ ಐದು ಮಂದಿಗೆ ಹಾಂಟಾವೈರಸ್ ಸೋಂಕು ದೃಢಪಟ್ಟಿದೆ. ಮೃತಪಟ್ಟವರಲ್ಲಿ 69 ವರ್ಷದ ಡಚ್ ಮಹಿಳೆ, ಅವರ ಪತಿ ಹಾಗೂ ಜರ್ಮನಿಯ ಮಹಿಳೆ ಸೇರಿದ್ದು, ಸಾವಿನ ಕಾರಣಗಳ ಕುರಿತು ತನಿಖೆ ನಡೆಯುತ್ತಿದೆ.
ಡಬ್ಲ್ಯುಎಚ್‌ಒ ಸೋಂಕು ತಜ್ಞೆ ಮರಿಯಾ ವ್ಯಾನ್ ಕೆರ್ಕೋವ್ ಮಾತನಾಡಿ, ಈ ಪರಿಸ್ಥಿತಿಯನ್ನು COVID-19 ಸಾಂಕ್ರಾಮಿಕದೊಂದಿಗೆ ಹೋಲಿಕೆ ಮಾಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಹಾಂಟಾವೈರಸ್ ಸಾಮಾನ್ಯವಾಗಿ ಅತೀ ಸಮೀಪದ ಸಂಪರ್ಕದಿಂದ ಮಾತ್ರ ಹರಡುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಹಡಗಿನಲ್ಲಿರುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಸೋಂಕಿತರ ಆರೈಕೆಯಲ್ಲಿ ತೊಡಗಿರುವವರು ಸಂಪೂರ್ಣ ರಕ್ಷಣಾ ಸಾಧನಗಳನ್ನು ಬಳಸಬೇಕು ಎಂದು ಸಲಹೆ ನೀಡಲಾಗಿದೆ.
ಸಾಮಾನ್ಯವಾಗಿ ಹಾಂಟಾವೈರಸ್ ಸೋಂಕಿತ ಇಲಿಗಳು ಅಥವಾ ಅವುಗಳ ಮಲಮೂತ್ರದ ಸಂಪರ್ಕದಿಂದ ಹರಡುತ್ತದೆ. ಆದರೆ ಈ ಪ್ರಕರಣದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆಯೂ ಕಂಡುಬಂದಿದೆ ಎಂದು WHO ತಿಳಿಸಿದೆ.
ಇತ್ತೀಚೆಗೆ ಹಡಗಿನಿಂದ ಇಳಿದ ಪ್ರಯಾಣಿಕರನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆ ತೀವ್ರ ನಿಗಾವಹಿಸಿದ್ದು, ಸೋಂಕು ಮತ್ತಷ್ಟು ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.