ಬೆಂಗಳೂರು: ಸ್ನ್ಯಾಪ್‌ಚಾಟ್ (Snapchat) ಮೂಲಕ ಪರಿಚಯವಾಗಿ ಒಂದು ವರ್ಷದ ಪ್ರೇಮ ಸಂಬಂಧದ ನಂತರ ಮದುವೆಯಾಗಿದ್ದ ದಂಪತಿ, ಕೇವಲ ಎರಡು ತಿಂಗಳಲ್ಲೇ ಬಿರುಕು ಕಂಡು ಪತಿ ಪತ್ನಿಯನ್ನು ತಿರಸ್ಕರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೊಂದ ಪತ್ನಿ “ನನಗೆ ಗಂಡ ಬೇಕು” ಎಂದು ಹೇಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಮಹಿಳೆ ಸುಮಾರು ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್‌ಚಾಟ್‌ನಲ್ಲಿ ಚೇತನ್ ಎಂಬ ಯುವಕನೊಂದಿಗೆ ಪರಿಚಯವಾಗಿದ್ದರು. ಈ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ನಂತರ ಮದುವೆಯವರೆಗೆ ಮುಂದುವರಿದಿತ್ತು.
ಮೂಲತಃ ಬೆಂಗಳೂರು ಉತ್ತರ ತಾಲೂಕಿನ ರಾವುತಹಳ್ಳಿ ನಿವಾಸಿಯಾಗಿರುವ ಚೇತನ್ ಹಾಗೂ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮಹಿಳೆಯ ನಡುವೆ ಆರಂಭವಾದ ಸ್ನೇಹವು ಬಳಿಕ ಗಂಭೀರ ಪ್ರೇಮ ಸಂಬಂಧವಾಗಿ ರೂಪುಗೊಂಡಿತ್ತು.
ಪೋಷಕರಿಲ್ಲದ ಮಹಿಳೆಯನ್ನು ಮದುವೆಯಾಗಿದ್ದ ಚೇತನ್, ಮನೆಯೊಳಗಿನ ವಿಚಾರಗಳಲ್ಲಿ ತಂದೆ-ತಾಯಿಗೆ ಗೌರವ ನೀಡುವುದಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ತೀವ್ರ ವಾಗ್ವಾದಗಳು ನಡೆದಿವೆ ಎಂದು ತಿಳಿದುಬಂದಿದೆ.
ಇದರಿಂದಾಗಿ ಮದುವೆಯಾದ ಕೇವಲ ಎರಡು ತಿಂಗಳಲ್ಲೇ ಸಂಬಂಧ ಹದಗೆಟ್ಟು, ಪತ್ನಿಯನ್ನು ಬೇಡವೆಂದು ಚೇತನ್ ತಿರಸ್ಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.