ಚಾಮರಾಜನಗರ/ಚಿಕ್ಕಮಗಳೂರು: ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣನ ಅಬ್ಬರಕ್ಕೆ ಹಲವು ಅವಾಂತರಗಳು ಸಂಭವಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಳ್ಯದಬಯಲಿನಲ್ಲಿ ಭಾರೀ ಮಳೆಯಾಗಿದ್ದು, ಸ್ಥಳೀಯ ನಿವಾಸಿ ಭಾಷಾ ಅವರ ಮನೆಗೆ ನೀರು ನುಗ್ಗಿದೆ. ನೀರನ್ನು ಹೊರಹಾಕಲು ಕುಟುಂಬಸ್ಥರು ರಾತ್ರಿಯಿಡೀ ಹರಸಾಹಸ ಪಟ್ಟಿದ್ದಾರೆ. ಮನೆಯಲ್ಲಿದ್ದ ಧವಸಧಾನ್ಯಗಳಿಗೂ ನೀರು ನುಗ್ಗಿದ ಪರಿಣಾಮ ಅಪಾರ ಹಾನಿ ಉಂಟಾಗಿದೆ.
ಇನ್ನೊಂದೆಡೆ ಚಿಕ್ಕಮಗಳೂರು ನಗರದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ನಾನಾ ಅವಾಂತರಗಳು ಸಂಭವಿಸಿವೆ. ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ಕೋಟೆ ಬಡಾವಣೆಯಲ್ಲಿ ಮನೆಗಳ ಮೇಲ್ಛಾವಣಿಯ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ಕೋರ್ಟ್ ಮುಂಭಾಗದಲ್ಲಿ ಹಲವು ವಿದ್ಯುತ್ ಕಂಬಗಳು ಕುಸಿದಿವೆ. ಐಬಿ ಮುಂಭಾಗದ ಕಾಂಪೌಂಡ್ ಗೋಡೆಯೂ ಕುಸಿತಗೊಂಡಿದೆ.
ಮಳೆಯಿಂದಾಗಿ ಚಿಕ್ಕಮಗಳೂರು ನಗರದ ಅರ್ಧ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.