ಹೈಲೈಟ್ಸ್:
ಅರಣ್ಯ, ಬಗರ್ ಹುಕುಂ, ‘ಬ’ ಖರಾಬು ಜಮೀನು ಬೆಳೆದವರಿಗೆ ಎಫ್‌ಐಡಿ ಸಿಗದೆ ಸಂಕಷ್ಟ
ಬಗರ್ ಹುಕುಂ ಫಾರಂ ನಂ.57 ಅಡಿಯಲ್ಲಿ ತಾಲೂಕಿನಲ್ಲಿ 13,807 ರೈತರಿಂದ ಹಕ್ಕುಪತ್ರ ಅರ್ಜಿ
ಗಣಿನಾಡಿನಲ್ಲಿ 5 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಕಂಗಾಲು
ಸಂಡೂರು: ಗಣಿನಾಡಿನ ಸಾವಿರಾರು ರೈತರಿಗೆ ಬಿತ್ತನೆಗೆ ಭೂಮಿ ಇದ್ದರೂ ಸರಿಯಾದ ದಾಖಲೆಗಳಿಲ್ಲ. ರೈತರ ಬಳಿ ಇರುವ ದಾಖಲೆಗಳನ್ನು ಸರ್ಕಾರ ಮಾನ್ಯಗೊಳಿಸದೇ ಇರುವುದರಿಂದ ಪ್ರಸಕ್ತ ಸಾಲಿನಲ್ಲಿ ‘ರೈತ ಗುರುತಿನ ಚೀಟಿ’ (ಎಫ್‌ಐಡಿ) ಪಡೆಯುವುದು ಅಸಾಧ್ಯವಾಗಿದೆ. ಇದರಿಂದ ಬಿತ್ತನೆ ಬೀಜ, ರಸಗೊಬ್ಬರ ಸಿಗದೇ ಹೋಗುವ ಭೀತಿ ರೈತರನ್ನು ಕಾಡುತ್ತಿದೆ. ತಾಲೂಕಿನಲ್ಲಿ ದಶಕಗಳಿಂದ ಅರಣ್ಯ, ಬಗರ್ ಹುಕುಂ, ‘ಬ’ ಖರಾಬು ಜಮೀನು ಅವಲಂಬಿಸಿ ಕೃಷಿ ಮಾಡುತ್ತಿರುವ 5 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಕಾನೂನು ತೊಡಕುಗಳಿಂದ ತೀವ್ರ ಸಂಕಷ್ಟ ಅನುಭವಿಸುತ್ತಿವೆ.
ರೈತರಿಗೆ ಕಾನೂನಿನ ತೊಡಕು:
ತಾಲೂಕಿನ ಒಟ್ಟು 94,359 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ ಕೇವಲ 37,506 ಹೆಕ್ಟೇರ್ ಭೂಮಿಯಷ್ಟೇ ಉಳುಮೆಗೆ ಲಭ್ಯವಾಗಿದೆ. ಇದರಲ್ಲಿ 34,290 ಹೆಕ್ಟೇರ್ ಕೃಷಿ ಮತ್ತು 3,216 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಬಳಸಲಾಗುತ್ತಿದೆ. 28,290 ಹೆಕ್ಟೇರ್ ಮಳೆ ಆಧಾರಿತ ಕೃಷಿಯಾಗಿದೆ. ಒಟ್ಟು 26,482 ರೈತ ಕುಟುಂಬಗಳಿದ್ದು, 20,517 ಸಣ್ಣ ಮತ್ತು ಅತಿ ಸಣ್ಣ ರೈತರು, 5,530 ಮಧ್ಯಮ ರೈತರು, 135 ದೊಡ್ಡ ರೈತರು ಎಂದು ಸರ್ಕಾರದ ಅಂಕಿಅಂಶಗಳು ತಿಳಿಸುತ್ತವೆ. ಆದರೆ ದಶಕಗಳಿಂದ ಅರಣ್ಯ ಜಮೀನಿನಲ್ಲಿ ಕೃಷಿ ಮಾಡುತ್ತಿರುವ 3,201 ರೈತರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಕೇವಲ 4 ಮಂದಿಗೆ ಮಾತ್ರ ಹಕ್ಕುಪತ್ರ ಸಿಕ್ಕಿದೆ. ಉಳಿದವರ ಸ್ಥಿತಿ ಗಂಭೀರವಾಗಿದೆ.
ಪ್ರತಿ ಮಳೆಗಾಲದ ಆರಂಭದಲ್ಲಿ ರೈತರು ತಾವು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನಿನಲ್ಲಿ ಕೃಷಿಗೆ ಸಿದ್ಧರಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಜಮೀನು ತನ್ನದಾಗಿದೆ ಎಂದು ಸಸಿ ನೆಡುವ ಕಾರ್ಯಕ್ಕೆ ಮುಂದಾಗುತ್ತದೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ಒತ್ತಡದ ಮೇರೆಗೆ ತಾತ್ಕಾಲಿಕ ಆದೇಶ ನೀಡಿ ರೈತರನ್ನು ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ.
ಇತ್ಯರ್ಥವಾಗದ ಬಗರ್ ಹುಕುಂ:
ಬಗರ್ ಹುಕುಂ ಫಾರಂ ನಂ.57 ಅಡಿಯಲ್ಲಿ ತಾಲೂಕಿನಲ್ಲಿ 13,807 ರೈತರು ಜಮೀನಿನ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು, ದಾಖಲೆಗಳ ಕೊರತೆಯಿಂದ 13,256 ಅರ್ಜಿಗಳು ತಿರಸ್ಕೃತವಾಗಿವೆ. 551 ಅರ್ಜಿಗಳು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಬಾಕಿ ಉಳಿದಿದ್ದು, ಹಕ್ಕುಪತ್ರ ನೀಡುವ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳಬೇಕಿದೆ.
‘ಬ’ ಖರಾಬು ಕಾಟ:
ತಾಲೂಕಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ರಾಜರ ಆಡಳಿತವಿದ್ದ 14 ಗ್ರಾಮಗಳಲ್ಲಿ ಸರ್ವೆ-ಸೆಟಲ್‌ಮೆಂಟ್ ಆಗಿರಲಿಲ್ಲ. ಕಳೆದ ವರ್ಷ 8 ಹಳ್ಳಿಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, 10 ಸಾವಿರ ರೈತರಿಗೆ ಭೂಮಿಯ ನಕ್ಷೆ ಸೇರಿದಂತೆ ಅಗತ್ಯ ದಾಖಲೆಗಳು ಲಭ್ಯವಾಗಿವೆ. ಆದರೆ ಇನ್ನೊಂದೆಡೆ, ಹಳ್ಳ, ಖರಾಬು, ರಾಳ, ಗುಡ್ಡ ಎಂದು ಗುರುತಿಸಲಾದ ಭೂಮಿಯಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು 6-7 ದಶಕಗಳಿಂದ ಕೃಷಿ ನಡೆಸುತ್ತಿದ್ದಾರೆ.
ಹಲವರ ಜಮೀನಿನಲ್ಲಿ ಸರ್ಕಾರಿ ಯೋಜನೆಯಡಿ ಗಂಗಾ ಕಲ್ಯಾಣ ಕೊಳವೆಬಾವಿ ಕೊರೆಸಲಾಗಿದೆ, ವಿದ್ಯುತ್ ಸಂಪರ್ಕ ನೀಡಲಾಗಿದೆ. ಕೆಲವರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಹಾಗೂ ಸಂಘಗಳಿಂದ ಸಾಲ ಪಡೆದಿದ್ದಾರೆ. ಆದರೆ ಸರ್ವೆ ಬಳಿಕ ಪಹಣಿಯಲ್ಲಿ ‘ಬ’ ಖರಾಬು, ಸರ್ಕಾರ ಎಂದು ನಮೂದಾಗಿರುವುದರಿಂದ ಇದೀಗ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅರಣ್ಯ, ಬಗರ್ ಹುಕುಂ ಹಾಗೂ ‘ಬ’ ಖರಾಬು ಜಮೀನು ಅವಲಂಬಿಸಿದ 5 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ಎಫ್‌ಐಡಿ ಇಲ್ಲದೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳಿಂದ ವಂಚಿತರಾಗುತ್ತಿರುವುದು ವಿಷಾದಕರ ಸಂಗತಿ.
ಆಡಳಿತಕ್ಕೆ ಮುಜುಗರ ಸಾಧ್ಯತೆ:
ತಾಲೂಕಿನಲ್ಲಿ ಭೂಹಕ್ಕಿಲ್ಲದೇ ದಶಕಗಳಿಂದ ಕೃಷಿ ನಡೆಸುತ್ತಿರುವ ಈ ರೈತ ಕುಟುಂಬಗಳು ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಇದು ತಾಲೂಕು ಆಡಳಿತಕ್ಕೆ ಮುಜುಗರ ತರಬಹುದು.
ಕಾಳಸಂತೆಕೋರರ ಕಾಟ:
ಎಫ್‌ಐಡಿ ಇಲ್ಲದ ಕಾರಣ ಸರ್ಕಾರಿ ಸೌಲಭ್ಯ ಸಿಗದ 5 ಸಾವಿರ ರೈತರು ಖಾಸಗಿ ಮಾರುಕಟ್ಟೆ ಅಥವಾ ಕಾಳಸಂತೆಕೋರರ ಮೇಲೆ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಬಹುದು. ಇದರಿಂದ ನಕಲಿ ಬೀಜ ಮತ್ತು ಕಳಪೆ ಗೊಬ್ಬರದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.