ಬೆಳಗಾವಿ, ಮೇ 23: ಸೂಪರ್‌ಹಿಟ್ ‘ಪುಷ್ಪ’ ಸಿನಿಮಾದಲ್ಲಿ ಟ್ಯಾಂಕರ್ ಒಳಗೆ ಹಾಲಿನ ಕೆಳಗೆ ಶ್ರೀಗಂಧದ ಮರದ ತುಂಡುಗಳನ್ನು ಬಚ್ಚಿಟ್ಟು ಸಾಗಿಸುವ ದೃಶ್ಯ ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿಯ ಸಿನಿಮೀಯ ತಂತ್ರ ಬಳಸಿ, ಆಯಿಲ್ ಟ್ಯಾಂಕರ್ ಒಳಗೆ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಭಾರೀ ಜಾಲವನ್ನು ಬೆಳಗಾವಿ ಜಿಲ್ಲೆಯ ಅಬಕಾರಿ ಇಲಾಖೆ ಪತ್ತೆಹಚ್ಚಿದೆ. ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಸುಮಾರು 35 ಲಕ್ಷ ರೂ. ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಬಳಸಲಾಗಿದ್ದ ಟ್ಯಾಂಕರ್ ಅನ್ನು ಜಪ್ತಿ ಮಾಡಲಾಗಿದೆ.
ಮುಖ್ಯಾಂಶಗಳು
ಜಾಂಬೋಟಿ ಬಳಿ 35 ಲಕ್ಷ ರೂ. ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ.
‘ಪುಷ್ಪ’ ಸಿನಿಮಾ ಮಾದರಿಯಲ್ಲಿ ಆಯಿಲ್ ಟ್ಯಾಂಕರ್ ಮೂಲಕ ಅಕ್ರಮ ಸಾಗಾಟ ನಡೆಸಲಾಗುತ್ತಿತ್ತು.
ನೆಲಮಂಗಲದಿಂದ ಗೋವಾಕ್ಕೆ ಸ್ಪಿರಿಟ್ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.
ಅಧಿಕಾರಿಗಳನ್ನು ಮರುಳುಗೊಳಿಸಲು ಸಿನಿಮೀಯ ಪ್ಲಾನ್!
ಬಂಧಿತ ಗ್ಯಾಂಗ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಕುತಂತ್ರದ ತಂತ್ರ ರೂಪಿಸಿತ್ತು. ಟ್ಯಾಂಕರ್‌ನ ಮೂರು ವಿಭಾಗಗಳಲ್ಲಿ ಮಾತ್ರ ಸಣ್ಣ ಪೈಪ್‌ಗಳನ್ನು ಅಳವಡಿಸಿ, ಅವುಗಳಲ್ಲಿ ಆಯಿಲ್ ತುಂಬಲಾಗುತ್ತಿತ್ತು. ತಪಾಸಣೆ ವೇಳೆ ಆ ಪೈಪ್‌ಗಳಲ್ಲಿ ಇದ್ದ ತೈಲವನ್ನೇ ತೋರಿಸಿ ಇದು ಸಾಮಾನ್ಯ ಆಯಿಲ್ ಟ್ಯಾಂಕರ್ ಎಂದು ನಂಬಿಸಲು ಯತ್ನಿಸುತ್ತಿದ್ದರು. ಆದರೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಖಾನಾಪುರ ಅಬಕಾರಿ ಅಧಿಕಾರಿಗಳಿಗೆ ಟ್ಯಾಂಕರ್ ಪರಿಶೀಲನೆ ವೇಳೆ ಅನುಮಾನ ವ್ಯಕ್ತವಾಗಿದೆ. ಬಳಿಕ ಪೈಪ್‌ಗಳನ್ನು ತೆರವುಗೊಳಿಸಿ ಆಳವಾಗಿ ತಪಾಸಣೆ ನಡೆಸಿದಾಗ, ಅದರ ಸುತ್ತಮುತ್ತ ಸಾವಿರಾರು ಲೀಟರ್ ಸ್ಪಿರಿಟ್ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ನೆಲಮಂಗಲದಿಂದ ಗೋವಾಕ್ಕೆ ಅಕ್ರಮ ರವಾನೆ
ಸಾಮಾನ್ಯವಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮ ಮದ್ಯ ಸರಬರಾಜಾಗುವ ಪ್ರಕರಣಗಳು ಕೇಳಿಬರುತ್ತವೆ. ಆದರೆ ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾಕ್ಕೆ ಸ್ಪಿರಿಟ್ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅಬಕಾರಿ ಇಲಾಖೆ ಇಡೀ ಜಾಲದ ಹಿಂದೆ ಇರುವವರ ಬಗ್ಗೆ ತನಿಖೆ ಆರಂಭಿಸಿದ್ದು, ಬಂಧಿತ ಆರೋಪಿಯಿಂದ ಮಹತ್ವದ ಮಾಹಿತಿ ಕಲೆಹಾಕುತ್ತಿದೆ. ಈ ದಂಧೆಯ ಹಿಂದೆ ಇರುವ ಪ್ರಮುಖ ಸೂತ್ರಧಾರರು ಯಾರು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.