Shivamogga: ವಿಶ್ವ ಪ್ರಸಿದ್ಧ Jog Falls ನಲ್ಲಿ ಬಂಡೆಯೊಂದು ಕುಸಿದು ಬಿದ್ದು ಭಾರೀ ಶಬ್ದ ಕೇಳಿ ಜನರಲ್ಲಿ ಆತಂಕ ಮೂಡಿಸಿದೆ. ರಾಕೆಟ್ ಫಾಲ್ಸ್ ಭಾಗದಲ್ಲಿ ಬಂಡೆಯ ಮೇಲಿನ ಪದರ ಕಳಚಿ ಕೆಳಗೆ ಬಿದ್ದಿದೆ.
ಸುಮಾರು ನೂರು ಅಡಿ ಎತ್ತರದಿಂದ ಬಂಡೆಯ ಪದರ ಕುಸಿದಿರುವ ಸಾಧ್ಯತೆ ಇದೆ. ಈ ವೇಳೆ ಉಂಟಾದ ಭಾರೀ ಶಬ್ದಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬಂಡೆ ಬಿದ್ದ ಪರಿಣಾಮ ಕೆಳಭಾಗದ ನೀರು ತೀವ್ರವಾಗಿ ಕಲಕಿಕೊಂಡಿದೆ. ಬೇಸಿಗೆ ಕಾಲವಾಗಿರುವುದರಿಂದ ನದಿಯ ಹರಿವು ಕಡಿಮೆಯಾಗಿದ್ದು, ಬಿಸಿಲಿನ ತಾಪದಿಂದ ಬಂಡೆ ದುರ್ಬಲವಾಗಿ ಕುಸಿದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಜಲಪಾತ ಪ್ರದೇಶದ ಭದ್ರತೆ ಕುರಿತು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.