ನವದೆಹಲಿ, ಮೇ 27: ಕರ್ನಾಟಕ, ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತ ವಿವಾದದ ನಡುವೆಯೇ, ಚುನಾವಣಾ ಆಯೋಗದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಬೆಂಬಲ ನೀಡಿದೆ. ಬಿಹಾರದಲ್ಲಿ ಚುನಾವಣಾ ಆಯೋಗ (ECI) ನಡೆಸಿದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಸಂಪೂರ್ಣವಾಗಿ ಸಂವಿಧಾನಬದ್ಧ ಮತ್ತು ಕಾನೂನುಸಮ್ಮತ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಸಂಪೂರ್ಣ ಅಧಿಕಾರವಿದೆ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಈ ತೀರ್ಪು ಪ್ರಕಟಿಸಿದೆ. ಸಂವಿಧಾನದ 324ನೇ ವಿಧಿ ಹಾಗೂ 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಇಂತಹ ವಿಶೇಷ ಪರಿಷ್ಕರಣೆ ನಡೆಸುವ ಪೂರ್ಣ ಹಕ್ಕಿದೆ ಎಂದು ಕೋರ್ಟ್ ಹೇಳಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಸಾಂವಿಧಾನಿಕ ಕರ್ತವ್ಯವಾಗಿದ್ದು, ಅದಕ್ಕಾಗಿ ಮತದಾರರ ಪಟ್ಟಿಯನ್ನು ನಿರಂತರವಾಗಿ ನವೀಕರಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.
ಸಾಮಾನ್ಯವಾಗಿ ನಡೆಯುವ ನಿಯಮಿತ ಪರಿಷ್ಕರಣೆಯಿಗಿಂತ ಈ ವಿಶೇಷ ಪ್ರಕ್ರಿಯೆ ವಿಭಿನ್ನವಾಗಿದೆ ಎಂಬ ಕಾರಣಕ್ಕೆ ಅದನ್ನು ಕಾನೂನುಬಾಹಿರ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗವು ತನ್ನ ಅಧಿಕಾರ ಮಿತಿಯನ್ನು ಮೀರಿ ನಡೆದುಕೊಂಡಿಲ್ಲ ಎಂದು ಕೂಡ ಪೀಠ ಅಭಿಪ್ರಾಯಪಟ್ಟಿದೆ.
ಈ ಬೃಹತ್ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಷ್ಟು ದೊಡ್ಡ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಲು ಚುನಾವಣಾ ಆಯೋಗಕ್ಕೆ ಶಾಸನಬದ್ಧ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ಸಂಬಂಧದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ಆಗಸ್ಟ್ 12ರಿಂದ ಆರಂಭಿಸಿತ್ತು.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ, ಬಿಹಾರದ ಕರಡು ಮತದಾರರ ಪಟ್ಟಿಯಿಂದ ಸುಮಾರು 65 ಲಕ್ಷ ನಕಲಿ ಅಥವಾ ಅಮಾನ್ಯ ಹೆಸರುಗಳನ್ನು ಚುನಾವಣಾ ಆಯೋಗ ತೆಗೆದುಹಾಕಿತ್ತು. 2002 ಅಥವಾ 2003ರ ಮತದಾರರ ಪಟ್ಟಿಯಲ್ಲಿ ಹೆಸರುಗಳಿಲ್ಲದವರು, ಆ ಪಟ್ಟಿಯಲ್ಲಿರುವ ವ್ಯಕ್ತಿಗಳೊಂದಿಗೆ ತಮ್ಮ ಪೂರ್ವಜರ ಸಂಬಂಧವನ್ನು ಸಾಬೀತುಪಡಿಸಬೇಕೆಂದು ಆಯೋಗ ಸೂಚಿಸಿತ್ತು.
ಈಗ ಸುಪ್ರೀಂ ಕೋರ್ಟ್ ಸಂಪೂರ್ಣ ಪ್ರಕ್ರಿಯೆಗೆ ಕಾನೂನು ಮಾನ್ಯತೆ ನೀಡಿರುವುದರಿಂದ ಚುನಾವಣಾ ಆಯೋಗದ ಕ್ರಮಕ್ಕೆ ನ್ಯಾಯಾಂಗದ ಮುದ್ರೆ ಬಿದ್ದಂತಾಗಿದೆ.
ಇತ್ತ ಕರ್ನಾಟಕದಲ್ಲಿಯೂ ಈ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಕಡಿತಗೊಳಿಸುವ ಪ್ರಯತ್ನ ಇದು ಎಂದು ಆರೋಪಿಸಿದ್ದ ಕಾಂಗ್ರೆಸ್, ಇದರ ವಿರುದ್ಧ ರಾಜಕೀಯ ಹಾಗೂ ಕಾನೂನು ಹೋರಾಟ ಮುಂದುವರಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು, ಎಸ್‌ಐಆರ್ ಪ್ರಕ್ರಿಯೆ ಬಡವರ ಮತಹಕ್ಕಿಗೆ ಕತ್ತರಿ ಹಾಕುವ ತಂತ್ರ ಎಂದು ಟೀಕಿಸಿದ್ದರು.