ಬೆಂಗಳೂರು: Dr. Rajkumar ಅವರು ಆರು ಕೋಟಿ ಕನ್ನಡಿಗರ ಹೃದಯದ ಭಾವನೆ. ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ಅಹಂಕಾರದ ತುದಿ. ಹೆಸರಿನಲ್ಲಿ ಅಹಿಂಸೆ ಇದ್ದರೂ, ನಿಮ್ಮ ಪ್ರತಿಯೊಂದು ಮಾತು ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ Nikhil Kumaraswamy, ನಟ Chetan Ahimsa ಅವರಿಗೆ ತಿರುಗೇಟು ನೀಡಿದ್ದಾರೆ.
ಡಾ. ರಾಜ್‌ಕುಮಾರ್ ಕುರಿತು ಚೇತನ್ ಮಾಡಿದ್ದ ಪೋಸ್ಟ್‌ಗೆ Xನಲ್ಲಿ ಪ್ರತಿಕ್ರಿಯಿಸಿದ ಅವರು, ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಮಹನೀಯರ ಬಗ್ಗೆ ಟೀಕಿಸುವ ಮುನ್ನ ಇತಿಹಾಸ ಅರಿತುಕೊಳ್ಳಿ ಎಂದು ಹೇಳಿದರು. ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜವಾದರೂ ಅವುಗಳಿಗೆ ಒಂದು ಮಿತಿ ಮತ್ತು ಘನತೆ ಅಗತ್ಯ. ನಮ್ಮ ಕುಟುಂಬದ ಮೇಲೆ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಟೀಕೆಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪು ನೀಡುವವರು ಜನರೇ ಹೊರತು, ದ್ವೇಷ ಬಿತ್ತುವವರು ಅಲ್ಲ. ಸಂಸ್ಕಾರ ಮನೆಯಿಂದಲೇ ಬರಬೇಕು; ಟೀಕೆಗಳು ಜನರ ಪ್ರೀತಿಯ ನೆಲೆಯಲ್ಲಿ ಇರಬೇಕು, ಪ್ರಚಾರದ ಆಸೆಯಿಂದ ಅಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.