ಚಿಕಾಗೋ: ಅಮೆರಿಕದ ಚಿಕಾಗೋ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 25 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮೂಲದ ನವ್ಯಾ ಗಡುಸು ಎಂದು ಗುರುತಿಸಲಾಗಿದೆ. ಇಂಡಿಯಾನಾ ರಾಜ್ಯದ ಲೇಕ್ ಕೌಂಟಿಯ ಕ್ರೌನ್ ಪಾಯಿಂಟ್ ಸಮೀಪದ ಇಂಟರ್‌ಸ್ಟೇಟ್ 65 ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಲೇಕ್ ಕೌಂಟಿ ಕರೋನರ್ ಕಚೇರಿ ಭಾನುವಾರ ಬೆಳಿಗ್ಗೆ 12:16ಕ್ಕೆ (ಸ್ಥಳೀಯ ಸಮಯ) ನವ್ಯಾ ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಅಪಘಾತದಲ್ಲಿ ಉಂಟಾದ ಗಂಭೀರ ಗಾಯಗಳೇ ಸಾವಿಗೆ ಕಾರಣ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ. ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ದುಃಖ ವ್ಯಕ್ತಪಡಿಸಿದ್ದು, ಮೃತಳ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದೆ. ಈ ಬಗ್ಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕಾನ್ಸುಲೇಟ್, “ಚಿಕಾಗೋ ಸಮೀಪದ ಅಪಘಾತದಲ್ಲಿ ಭಾರತೀಯ ವಿದ್ಯಾರ್ಥಿನಿ ನವ್ಯಾ ಗಡುಸು ಮೃತಪಟ್ಟಿರುವ ಸುದ್ದಿ ತಿಳಿದು ತೀವ್ರ ಸಂತಾಪವಾಗಿದೆ. ಈ ಸಂಕಷ್ಟದ ಹೊತ್ತಿನಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ನಾವಿದ್ದೇವೆ” ಎಂದು ಉಲ್ಲೇಖಿಸಿದೆ.
ಇಂಡಿಯಾನಾ ರಾಜ್ಯ ಪೊಲೀಸರ ಮಾಹಿತಿ ಪ್ರಕಾರ, ರಾತ್ರಿ ಸುಮಾರು 11:15ರ ವೇಳೆಗೆ ಏಳು ಯುವತಿಯರಿದ್ದ ಕೆಂಪು ಮಿನಿವ್ಯಾನ್ ತಾಂತ್ರಿಕ ದೋಷದಿಂದ ನಿಧಾನವಾಗಿ ಸಾಗುತ್ತಿತ್ತು. ಈ ವೇಳೆ ಹಿಂದಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದಾಗ, ವ್ಯಾನ್ ಎಡಭಾಗದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಅಪಘಾತ ಸಂಭವಿಸಿದ ವೇಳೆ ವಾಹನದಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.