ಮುಂಬೈ: ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ನಾರಾಯಣ ರಾಣೆಗೆ ಸ್ಥಳೀಯ ನ್ಯಾಯಾಲಯವು ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮೇಲೆ ಕೆಸರು ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಸಿಂಧುದುರ್ಗದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನಿತೇಶ್ ರಾಣೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 ಅಡಿಯಲ್ಲಿ ದೋಷಿ ಎಂದು ತೀರ್ಮಾನಿಸಿದೆ. ನ್ಯಾಯಾಲಯವು ಒಂದು ತಿಂಗಳ ಕಾರಾಗೃಹ ಶಿಕ್ಷೆಯೊಂದಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಅದರಲ್ಲಿ 50 ಸಾವಿರ ರೂಪಾಯಿಯನ್ನು ಪೀಡಿತ ಎಂಜಿನಿಯರ್‌ಗೆ ಪರಿಹಾರವಾಗಿ ನೀಡುವಂತೆ ಸೂಚಿಸಿದೆ. ಜನಪ್ರತಿನಿಧಿಗಳು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಹಾಗೂ ಸಾರ್ವಜನಿಕ ಸೇವಕರ ಗೌರವಕ್ಕೆ ಧಕ್ಕೆ ತರಬಾರದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಶಿಕ್ಷೆ ಪ್ರಕಟವಾದ ತಕ್ಷಣವೇ ನ್ಯಾಯಾಲಯ ಅದನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದು, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಣೆಗೆ ಅವಕಾಶ ನೀಡಿದೆ. ಇದರಿಂದಾಗಿ ಅವರು ತಕ್ಷಣದ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸಂಬಂಧ ಹೊಂದಿದ್ದ ಇತರ 29 ಆರೋಪಿಗಳನ್ನು ಸಾಕ್ಷ್ಯಗಳ ಕೊರತೆಯಿಂದ ನ್ಯಾಯಾಲಯ ಬಿಡುಗಡೆ ಮಾಡಿದೆ.
ಏನಿದು ಪ್ರಕರಣ?
ಮುಂಬೈ-ಗೋವಾ ಹೆದ್ದಾರಿಯ ಕಂಕಾವ್ಲಿ ಭಾಗದಲ್ಲಿ ರಸ್ತೆ ತುಂಬಾ ಗುಂಡಿಗಳಿಂದ ಕೂಡಿದ್ದು, ಮಳೆಯ ಕಾರಣ ನೀರು ನಿಂತು ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ರಸ್ತೆ ಕಾಮಗಾರಿ ಕಳಪೆಯಾಗಿ ನಡೆಯುತ್ತಿದ್ದು, ಸರಿಯಾದ ನೀರು ಹರಿವು ವ್ಯವಸ್ಥೆಯ ಕೊರತೆಯಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದರು. ಅನೇಕ ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆ 2019ರಲ್ಲಿ ರಾಣೆ ತಮ್ಮ ಬೆಂಬಲಿಗರೊಂದಿಗೆ ಸೇರಿ ಎನ್‌ಎಚ್‌ಎಐ ಎಂಜಿನಿಯರ್ ಮೇಲೆ ಕೆಸರು ಎರಚಿ ಪ್ರತಿಭಟನೆ ನಡೆಸಿದ್ದರು.