ಚಿಕ್ಕಮಗಳೂರು: ಮುಳ್ಳಯ್ಯನಗಿರಿ ರಸ್ತೆಯ ಇಳಿಜಾರಿನಲ್ಲಿ ಟಿಟಿ (TT) ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಸೀತಾಳಯ್ಯನಗಿರಿ (Seethalayanagiri) ಸಮೀಪ ನಡೆದಿದೆ. ಬೆಂಗಳೂರಿನಿಂದ 13 ಮಂದಿ ಪ್ರವಾಸಿಗರು ಸೋಮವಾರ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದರು. ಸಂಜೆ ವಾಪಸ್ಸಾಗುವ ವೇಳೆ ವಾಹನದ ಹಿಂಬದಿ ಆಸನದಲ್ಲಿದ್ದ ಪ್ರಯಾಣಿಕನ ಪಾದರಕ್ಷೆ ಚಾಲಕನ ಕಾಲಿನ ಬಳಿ ಬಿದ್ದಿತ್ತು. ಅದು ಬ್ರೇಕ್ ಅಥವಾ ಎಕ್ಸಲೇಟರ್ಗೆ ಅಡ್ಡಿಯಾಗಬಹುದು ಎಂದು ಅದನ್ನು ತೆಗೆಯಲು ಹೋಗಿದ್ದ ವೇಳೆ ಟಿಟಿ ನ್ಯೂಟ್ರಲ್ಗೆ ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ಅದೃಷ್ಟವಶಾತ್ ಎಲ್ಲ 13 ಮಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ವಾಹನದ ಮುಂಭಾಗಕ್ಕೆ ಮಾತ್ರ ಸಣ್ಣ ಪ್ರಮಾಣದ ಹಾನಿಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಕ್ರೇನ್ ಸಹಾಯದಿಂದ ವಾಹನವನ್ನು ಮೇಲಕ್ಕೆ ಎತ್ತಲಾಗಿದೆ. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಟಿಟಿ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯ ಪ್ರವಾಸಿ ಮಿತ್ರರ ತಂಡ ತಕ್ಷಣ ಧಾವಿಸಿ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದೆ.