ಹಣದ ಆಸೆ ಮನುಷ್ಯನನ್ನು ಎಷ್ಟು ದೂರಕ್ಕೂ ಕೊಂಡೊಯ್ಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸುಲಭವಾಗಿ ಹಣ ಸಂಪಾದನೆ ಮಾಡಲು ಕೆಲವರು ನಿಯಮಗಳನ್ನೇ ಮೀರಿ ನಡೆದುಕೊಳ್ಳುತ್ತಾರೆ. ಇದೀಗ ‘ವಂದೇ ಭಾರತ್ ಎಕ್ಸ್‌ಪ್ರೆಸ್’ (Vande Bharat Express) ರೈಲಿನಲ್ಲಿ ಅಧಿಕೃತ ದರಕ್ಕಿಂತ ಕಡಿಮೆ ಬೆಲೆಗೆ ಟಿಕೆಟ್ ನೀಡುತ್ತಿದ್ದ ಟಿಟಿಇ ಒಬ್ಬರು ಪ್ರಯಾಣಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ರೈಲ್ವೆ ಇಲಾಖೆ ಸಂಬಂಧಿತ ಟಿಟಿಇಯನ್ನು ಅಮಾನತುಗೊಳಿಸಿದೆ.
‘ಘರ್ ಕೆ ಕಲೇಷ್’ (Ghar Ke Kalesh) ಎಂಬ ಎಕ್ಸ್ ಖಾತೆಯಲ್ಲಿ ವೈರಲ್ ಆದ ವಿಡಿಯೋದಲ್ಲಿ, ಟಿಟಿಇ ಮತ್ತು ಪ್ರಯಾಣಿಕರ ನಡುವೆ ನಡೆದ ಮಾತುಕತೆ ಸ್ಪಷ್ಟವಾಗಿ ಕೇಳಿಸುತ್ತದೆ. ಸುಮಾರು 700 ರೂಪಾಯಿ ಮೌಲ್ಯದ ವಂದೇ ಭಾರತ್ ಟಿಕೆಟ್ ಅನ್ನು ಕೇವಲ 380 ರೂಪಾಯಿಗೆ ಕೊಡಬಹುದೆಂದು ಟಿಟಿಇ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ನಿಯಮಗಳಿಗೆ ವಿರುದ್ಧವೆಂದು ಗೊತ್ತಿದ್ದರೂ ಕಡಿಮೆ ದರದಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಭರವಸೆ ನೀಡಿರುವುದು ಗಮನಸೆಳೆಯಿತು.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ರೈಲ್ವೆ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದಾರೆ. ದಾನಾಪುರ ವಿಭಾಗದ ರೈಲ್ವೆ ವ್ಯವಸ್ಥಾಪಕರು, ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದ್ದು, ಸಂಬಂಧಿತ ಟಿಟಿಇಯನ್ನು ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವಿಡಿಯೋ ಈಗಾಗಲೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಭ್ರಷ್ಟಾಚಾರದ ಮತ್ತೊಂದು ಮುಖ” ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, “ಇಂತಹವರಿಂದಲೇ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕಡಿಮೆಯಾಗುತ್ತಿದೆ” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು, “ಕಡಿಮೆ ದರಕ್ಕೆ ಪ್ರಯಾಣ ವ್ಯವಸ್ಥೆ ಮಾಡಿಕೊಡಲು ಯತ್ನಿಸಿದ್ದು ಸಹಾಯ ಮನೋಭಾವವೇ ಇರಬಹುದು” ಎಂದು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.