ವಿಜಯಪುರ: ಪಂಚನದಿಗಳ ಬೀಡು ಎಂದೇ ಗುರುತಿಸಲ್ಪಡುವ ವಿಜಯಪುರ ಜಿಲ್ಲೆಯಲ್ಲಿ ಈಗ ನೀರಿನ ತೀವ್ರ ಬಿಕ್ಕಟ್ಟು ಎದುರಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಉಳಿದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯ ಜನತೆ ದೈನಂದಿನ ನೀರಿನ ಅವಶ್ಯಕತೆಗೆ ಕೃಷ್ಣಾ ನದಿಯ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಇದೇ ರೀತಿಯಲ್ಲಿ ಪಕ್ಕದ ಬಾಗಲಕೋಟೆ ಜಿಲ್ಲೆಯೂ ಕೃಷ್ಣಾ ನದಿಯ ನೀರಿನ ಮೇಲೆ ನಿಂತಿದೆ. ವಿಜಯಪುರ–ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ಆಲಮಟ್ಟಿ ಜಲಾಶಯವೇ ಪ್ರಮುಖ ನೀರಿನ ಮೂಲವಾಗಿದ್ದು, ಸದ್ಯದ ಸ್ಥಿತಿಯಲ್ಲಿ ಕೇವಲ 9 ಟಿಎಂಸಿ ನೀರಷ್ಟೇ ಬಳಕೆಗೆ ಲಭ್ಯವಿದೆ.
ಮುಂದಿನ ಜೂನ್ ತಿಂಗಳು ಅಂತ್ಯವಾಗುವವರೆಗೂ ಇದೇ ನೀರಿನ ಪ್ರಮಾಣವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅವಳಿ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಹಲವೆಡೆ ವಾರಕ್ಕೊಮ್ಮೆ ನೀರು ಸರಬರಾಜು ನಡೆಯುತ್ತಿದ್ದು, ಕೆಲವು ಪ್ರದೇಶಗಳಲ್ಲಿ 15 ದಿನಗಳಿಗೊಮ್ಮೆ ಮಾತ್ರ ನೀರು ದೊರಕುತ್ತಿದೆ.
ಜಿಲ್ಲೆಯಲ್ಲಿ ತೀವ್ರ ಬಿಸಿಲಿನ ತಾಪಮಾನವೂ ಹೆಚ್ಚಾಗಿದ್ದು, ಹಿಂದಿನ ವರ್ಷಗಳಿಗಿಂತ ಈ ಬಾರಿ ಬಾಷ್ಟೀಕರಣ ಪ್ರಮಾಣವೂ ಏರಿಕೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಜೂನ್ 15ರ ನಂತರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಇನ್ನು ಮುಂದಿನ ಒಂದು ತಿಂಗಳು ಈ 9 ಟಿಎಂಸಿ ನೀರಿನಲ್ಲೇ ಜನರು ಹಾಗೂ ಜಾನುವಾರುಗಳು ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ. ಇತ್ತ ಭೀಮಾ ನದಿ ಕೂಡ ಸಂಪೂರ್ಣವಾಗಿ ಒಣಗಿರುವುದರಿಂದ, ಜೂನ್‌ನಲ್ಲಿ ಮಳೆ ವಿಳಂಬವಾದರೆ ಅವಳಿ ಜಿಲ್ಲೆಯಲ್ಲಿ ನೀರಿಗಾಗಿ ತೀವ್ರ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ.