ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಐ-ಪಿಎಸಿ ಸಂಸ್ಥೆಯ ಸಹ-ಸ್ಥಾಪಕ ಹಾಗೂ ನಿರ್ದೇಶಕ ವಿನೇಶ್ ಚಾಂಡೆಲ್ ಅವರಿಗೆ ನವದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಜಾಮೀನು ನೀಡಿದೆ.
ವಿಚಾರಣೆ ವೇಳೆ ವಿನೇಶ್ ಚಾಂಡೆಲ್ ಸಲ್ಲಿಸಿದ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ವಿರೋಧ ವ್ಯಕ್ತಪಡಿಸದಿರುವುದನ್ನು ಗಮನಿಸಿದ ನ್ಯಾಯಾಲಯ, ಅವರಿಗೆ ಬೇಲ್ ಮಂಜೂರು ಮಾಡಿತು. ತನಿಖೆಯಲ್ಲಿ ಚಾಂಡೆಲ್ ಸಂಪೂರ್ಣ ಸಹಕಾರ ನೀಡಿರುವುದು ಹಾಗೂ ಅಗತ್ಯವಿದ್ದಾಗಲೆಲ್ಲಾ ಮಾಹಿತಿ ಒದಗಿಸಿರುವುದನ್ನು ಕೋರ್ಟ್ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಜಾಮೀನು ತಿರಸ್ಕರಿಸಲು ಯಾವುದೇ ದೃಢವಾದ ಕಾರಣಗಳಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಜಾಮೀನು ಅರ್ಜಿಯಲ್ಲಿ ತಾಯಿ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆ ಮಾನವೀಯ ಆಧಾರದ ಮೇಲೆ ಮಧ್ಯಂತರ ಪರಿಹಾರ ನೀಡುವಂತೆ ಚಾಂಡೆಲ್ ಮನವಿ ಮಾಡಿದ್ದರು. ಜಾಮೀನು ನೀಡುವ ವೇಳೆ ನ್ಯಾಯಾಲಯವು ಹಲವು ಷರತ್ತುಗಳನ್ನು ವಿಧಿಸಿದ್ದು, ಪ್ರಕರಣದ ಸಾಕ್ಷ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡಬಾರದು, ತನಿಖೆಗೆ ಪೂರ್ಣ ಸಹಕಾರ ನೀಡಬೇಕು ಹಾಗೂ ಅಗತ್ಯವಿದ್ದಾಗ ಹಾಜರಾಗಲು ಸಿದ್ಧರಾಗಿರಬೇಕು ಎಂದು ಸೂಚಿಸಿದೆ.