‘ತಿಥಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯತೆ ಗಳಿಸಿದ್ದ ಗ್ರಾಮೀಣ ಪ್ರತಿಭೆ ಗಡ್ಡಪ್ಪ (ಅಲಿಯಾಸ್ ಚನ್ನೇಗೌಡ) ವಿಧಿವಶರಾಗಿದ್ದಾರೆ. 89 ವರ್ಷದ ವಯಸ್ಸಿನ ಗಡ್ಡಪ್ಪ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ನವೆಂಬರ್ 12 ರಂದು ಕೊನೆಯುಸಿರೆಳೆದಿದ್ದಾರೆ.
ಶ್ರೀರಂಗಪಟ್ಟಣದ ಡಾ. ಕೆ. ವೈ. ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಅವರು ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ್ದರು. ರಕ್ತದೊತ್ತಡ, ಮಧುಮೇಹ ಮತ್ತು ಅಸ್ತಮಾ ಪರೀಕ್ಷೆಗಳಲ್ಲಿ ವೈದ್ಯರು “ಗಡ್ಡಪ್ಪ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿತ್ತು. ಪಾಶ್ರ್ವವಾಯು ಸಮಸ್ಯೆ ಹೊರತುಪಡಿಸಿ ಗಂಭೀರ ಸಮಸ್ಯೆಗಳೇನೂ ಇಲ್ಲ” ಎಂದು ತಿಳಿಸಿದ್ದರು.
ಗಡ್ಡಪ್ಪ ಅಭಿನಯಿಸಿದ್ದ ಕೆಲವು ಪ್ರಸಿದ್ಧ ಚಿತ್ರಗಳು
‘ತಿಥಿ’, ‘ಗಡ್ಡಪ್ಪನ ಸರ್ಕಲ್’, ‘ತಾತನ್ ತಿಥಿ ಮೊಮ್ಮಗನ ಪ್ರಸ್ಥ’, ‘ಹಾಲು - ತುಪ್ಪ’, ‘ತರ್ಲೇ ವಿಲೇಜ್’, ‘ಏನ್ ನಿನ್ ಪ್ರಾಬ್ಲಮ್ಮು’, ‘ಹಳ್ಳಿ ಪಂಚಾಯತಿ’, ‘ಗಡ್ಡಪ್ಪನ್ ದುನಿಯಾ’, ‘ಜಾನಿ ಜಾನಿ ಯೆಸ್ ಪಪ್ಪಾ’ ಮುಂತಾದ ಸಿನಿಮಾಗಳಲ್ಲಿ ಚನ್ನೇಗೌಡ ಅಲಿಯಾಸ್ ಗಡ್ಡಪ್ಪ ಅಭಿನಯಿಸಿದ್ದಾರೆ.
ರೈತಾಪಿ ಕುಟುಂಬ ಹಿನ್ನೆಲೆ
ಗಡ್ಡಪ್ಪ ರೈತಾಪಿ ಕುಟುಂಬದಲ್ಲಿ ಹುಟ್ಟಿದ್ದು ಬೆಳೆದವರು. ಅವರು ಹಿಂದಿನಿಂದಲೇ “ನಾವು ರೈತರು, ನಮಗೆ ಅಭಿನಯ ಗೊತ್ತಿಲ್ಲ, ಗೊತ್ತಿರುವಷ್ಟು ಅಭಿನಯಿಸುತ್ತಿದ್ದೇವೆ” ಎಂದು ತಮ್ಮ ಸಾಹಸ ಮತ್ತು ಹಳೆಯ ಕಾಲದ ಸಂಪ್ರದಾಯವನ್ನು ಹಂಚಿಕೊಂಡಿದ್ದಾರೆ.