ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯದಲ್ಲಿ ಚಿರತೆಯನ್ನು ಬೇಟೆಯಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ನಾಲ್ವರನ್ನು ಬಂಧಿಸಿದೆ. ಯಡಮೊಗೆ ಗ್ರಾಮದ ಸಾಲಿಮಕ್ಕಿಯ ಮಂಜುನಾಥ ಶೆಟ್ಟಿ, ಕಾವ್ರಾಡಿ ಗ್ರಾಮದ ಕಂಡೂರಿನ ನದೀಮ್ ಕರಾಣಿ ಹಾಗೂ ಯಡಮೊಗೆ ಗ್ರಾಮದ ಹನೆಬಚ್ಚಲು ನಿವಾಸಿಗಳಾದ ನಾಗರಾಜ ಭೋವಿ ಮತ್ತು ವೆಂಕಟರಮಣ ಭೋವಿ ಬಂಧಿತರು. ಆರೋಪಿಗಳಿಂದ ಚಿರತೆಯ ನಾಲ್ಕು ಕಾಲಿನ ಉಗುರುಗಳು, ಮೂಳೆಯ ತುಂಡುಗಳು, ಒಂದು ಬಂದೂಕು, ಐದು ಜೀವಂತ ಗುಂಡುಗಳು ಮತ್ತು ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆಬ್ರವರಿ 4ರಂದು ಸಿದ್ದಾಪುರ-ಶಿವಮೊಗ್ಗ ರಸ್ತೆ ಸಮೀಪ ಚಿರತೆ ಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳು ಮೇ 21ರಂದು ಮಂಜುನಾಥ ಶೆಟ್ಟಿಯನ್ನು ಬಂಧಿಸಿದ್ದರು. ಬಳಿಕ ಆತ ನೀಡಿದ ಮಾಹಿತಿಯ ಮೇರೆಗೆ ಉಳಿದ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಬಂಧಿತರನ್ನು ಕುಂದಾಪುರ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.