ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ದೊರೆಯುತ್ತಿರುವ ಮಾಸಿಕ ಎರಡು ಸಾವಿರ ರೂಪಾಯಿಯನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಕೊಪ್ಪಳ ಜಿಲ್ಲೆಯ ಮೂವರು ಮಹಿಳೆಯರು ರೊಟ್ಟಿ ತಯಾರಿಕಾ ಕೇಂದ್ರ ಆರಂಭಿಸಿ ಅದಕ್ಕೆ ‘ಗೃಹಲಕ್ಷ್ಮಿ ರೊಟ್ಟಿ ಕೇಂದ್ರ’ ಎಂದು ನಾಮಕರಣ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಸ್ವಯಂ ಉದ್ಯೋಗದತ್ತ ಮಹಿಳೆಯರ ಹೆಜ್ಜೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಮಕ್ತುಮ್ಬಿ ಕೊಪ್ಪದ, ಸಾಜನಬಿ ದಾದಿಬಾಯಿ ಹಾಗೂ ಹುಸೇನಬಿ ಕಮ್ಮಾರ ಎಂಬ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಉಳಿತಾಯ ಮಾಡಿ ಹುಬ್ಬಳ್ಳಿಯಿಂದ ರೊಟ್ಟಿ ತಯಾರಿಕಾ ಯಂತ್ರ ಖರೀದಿಸಿ ಸ್ವಂತ ಉದ್ಯಮ ಆರಂಭಿಸಿದ್ದಾರೆ.
ರೊಟ್ಟಿ ಉದ್ಯಮ ಆರಂಭಿಸಲು 29 ಕಂತುಗಳಲ್ಲಿ ಬಂದ ತಲಾ 58 ಸಾವಿರ ರೂಪಾಯಿಯನ್ನು ಹೂಡಿಕೆ ಮಾಡಿದ ಮಹಿಳೆಯರು, ತಮ್ಮ ಸ್ವಂತ ಹಣವನ್ನೂ ಸೇರಿಸಿ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ರೊಟ್ಟಿ ಮಿಷನ್ ಅಳವಡಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ.
ಸ್ವಾವಲಂಬನೆಯ ಬದುಕಿಗೆ ಹೊಸ ದಾರಿ
ಈ ರೊಟ್ಟಿ ಮಿಷನ್‌ನಲ್ಲಿ ಪ್ರತಿದಿನ ತಯಾರಾಗುವ ರೊಟ್ಟಿಗಳನ್ನು ಪಟ್ಟಣದ ಹೋಟೆಲ್‌ಗಳು, ಡಾಬಾಗಳು, ಖಾನಾವಳಿಗಳು ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಪೂರೈಕೆ ಮಾಡುವ ಉದ್ದೇಶ ಹೊಂದಿದ್ದು, ಇದರಿಂದ ಮಹಿಳೆಯರಿಗೆ ಸ್ಥಿರ ಆದಾಯ ದೊರೆಯುವ ನಿರೀಕ್ಷೆಯಿದೆ.
ಗಣ್ಯರಿಂದ ಉದ್ಘಾಟನೆ
ಕುಷ್ಟಗಿಯಲ್ಲಿ ಮಹಿಳೆಯರು ಆರಂಭಿಸಿರುವ ‘ಗೃಹಲಕ್ಷ್ಮಿ ರೊಟ್ಟಿ ಕೇಂದ್ರ’ವನ್ನು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸನಗೌಡ ಬಯ್ಯಾಪುರ, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಫಾರೂಕ್ ಡಾಲಾಯತ್ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉದ್ಘಾಟಿಸಿದರು.
ಗೃಹಲಕ್ಷ್ಮಿ ಯೋಜನೆಯಿಂದ ದೊರೆಯುವ ಹಣವನ್ನು ಉಳಿತಾಯ ಮಾಡಿ ನಾವು ಮೂವರು ಸೇರಿ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ರೊಟ್ಟಿ ಕೇಂದ್ರ ಆರಂಭಿಸಿದ್ದೇವೆ. ನಮ್ಮ ಉದ್ಯಮ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತಿದೆ. ಯೋಜನೆಯ ಹಣವನ್ನು ಬಳಸಿಕೊಂಡು ಕುಷ್ಟಗಿಯಲ್ಲಿ ರೊಟ್ಟಿ ಕೇಂದ್ರ ಆರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದು ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಯ ಹಣವನ್ನು ಉದ್ಯೋಗ ಸೃಷ್ಟಿಗೆ ಬಳಸಿರುವುದು ಮಾದರಿಯ ಕಾರ್ಯವಾಗಿದೆ. ಮಹಿಳೆಯರು ಯೋಜನೆಗಳ ಸದುಪಯೋಗ ಪಡೆದುಕೊಂಡರೆ ಕುಟುಂಬದ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗಬಹುದು ಎಂಬುದಕ್ಕೆ ಈ ರೊಟ್ಟಿ ಕೇಂದ್ರ ಉತ್ತಮ ಉದಾಹರಣೆ ಎಂದು ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸನಗೌಡ ಬಯ್ಯಾಪುರ ತಿಳಿಸಿದ್ದಾರೆ.