ಬೆಂಗಳೂರು: Bowring and Lady Curzon Hospital ಗೋಡೆ ಕುಸಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜಗದೀಶ್ ಸರ್ಕಾರಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಹಲವು ಗಂಭೀರ ಅಂಶಗಳು ಬೆಳಕಿಗೆ ಬಂದಿವೆ. ಏಳು ಜನರ ಸಾವಿಗೆ ಆರೋಗ್ಯ ಇಲಾಖೆ ಇಂಜಿನಿಯರ್, ಗುತ್ತಿಗೆದಾರ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ವರದಿ ಉಲ್ಲೇಖಿಸಿದೆ. ಗೋಡೆ ಪಕ್ಕದಲ್ಲಿ ಅತಿಯಾಗಿ ಮಣ್ಣು ಸುರಿದಿರುವುದು ದುರಂತಕ್ಕೆ ಮೂಲ ಕಾರಣವಾಗಿದ್ದು, ಅದನ್ನು ಸಮಯಕ್ಕೆ ತೆರವುಗೊಳಿಸದಿರುವುದು ಅವಘಡಕ್ಕೆ ಕಾರಣವಾಯಿತು ಎಂದು ತಿಳಿಸಲಾಗಿದೆ. 8 ಅಡಿ ಎತ್ತರದ ಗೋಡೆ ಪಕ್ಕದಲ್ಲಿ ಸುಮಾರು 6 ಅಡಿ ಮಣ್ಣು ಹಾಕಲಾಗಿತ್ತು. ಅಲ್ಲದೆ, ಗೋಡೆ ಪಕ್ಕದಲ್ಲೇ ಕ್ರಿಕೆಟ್ ನೆಟ್ ನಿರ್ಮಿಸಲು ಮಣ್ಣು ಸುರಿದಿದ್ದು, ಸಿಎಸ್‌ಆರ್ ನಿಧಿಯಿಂದ ದಾನಿಯೊಬ್ಬರ ಸಹಕಾರದಲ್ಲಿ ಆಸ್ಪತ್ರೆ ಆಡಳಿತ ಸ್ಟೇಡಿಯಂ ಮಾದರಿಯ ವ್ಯವಸ್ಥೆ ರೂಪಿಸಿತ್ತು ಎಂಬುದೂ ವರದಿಯಲ್ಲಿ ಬಹಿರಂಗವಾಗಿದೆ