
ಶಿವಮೊಗ್ಗ, ಸೆ.2: ಸಾರ್ವಜನಿಕ ವಾಹನ ಸವಾರರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಮರವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ, ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಮನಗಂಡು ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ 20 ಗಿಡಗಳನ್ನು ನೆಡಲಾಯಿತು.
ಶಿವಮೊಗ್ಗ ನಗರದ ದಿನದಯಾಳು ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದ್ದ ಮರವನ್ನು ತೆರವುಗೊಳಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ‘ಮರ ತೆರವುಗೊಳಿಸಿದರೆ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಗಿಡಗಳನ್ನು ನೆಡಬೇಕು’ ಎಂಬ ಆಶಯದೊಂದಿಗೆ ಠಾಣೆ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮವನ್ನು ಶಿವಮೊಗ್ಗ ‘ಬಿ’ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್ ಹಾಗೂ ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ಡಾ. ಅಜ್ಜಯ್ಯ ಜಿ.ಆರ್. ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಸಂಚಾರ ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್, ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಜೆ., ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಕೆ., ಪರಿಸರ ಕಾರ್ಯಕರ್ತ ರಮೇಶ್, ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಸ್ವಪ್ನಾ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, NHR & ACB ಪ್ರತಿನಿಧಿ ರಂಜನ್ ಹಾಗೂ ಜೆಎನ್ಎನ್ಸಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆಗೆ ಕರೆ
ಸಂಚಾರ ವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯಷ್ಟೇ ಪರಿಸರ ಸಂರಕ್ಷಣೆಯೂ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಗರ ಪ್ರದೇಶಗಳಲ್ಲಿ ಹಸಿರು ವಾತಾವರಣ ನಿರ್ಮಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಯಿತು.
“ಒಂದು ಮರ ತೆರವುಗೊಳಿಸಿದರೆ ಹತ್ತು ಗಿಡಗಳನ್ನು ನೆಡೋಣ; ಹಸಿರು ಶಿವಮೊಗ್ಗ ನಿರ್ಮಿಸೋಣ” ಎಂಬ ಪರಿಸರ ಜಾಗೃತಿ ಸಂದೇಶದೊಂದಿಗೆ ಕಾರ್ಯಕ್ರಮ ಗಮನ ಸೆಳೆಯಿತು.