ಗಾಜಾ: ಗಾಜಾ ಪ್ರದೇಶದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಮತ್ತೆ ಭಂಗವಾಗಿದೆ. ಉತ್ತರ ಹಾಗೂ ಮಧ್ಯ ಗಾಜಾದಲ್ಲಿ ನಡೆದ ಇಸ್ರೇಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಂದ ಕನಿಷ್ಠ 24 ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆರೋಗ್ಯ ಮೂಲಗಳು ತಿಳಿಸಿವೆ. ಗಾಯಾಳುಗಳಲ್ಲಿ ಮಕ್ಕಳು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ.
ಯುಎಸ್ ಮಧ್ಯಸ್ಥಿಕೆಯಲ್ಲಿ ಅಕ್ಟೋಬರ್ 10ರಿಂದ ಜಾರಿಗೆ ಬಂದಿದ್ದ ವಿರಾಮದ ನಂತರ ಶನಿವಾರ ಮೊದಲ ಬಾರಿಗೆ ತೀವ್ರ ಘರ್ಷಣೆ ಸಂಭವಿಸಿದೆ. ಗಾಜಾ ಪಟ್ಟಿಯ ಒಳಗಿನ "ಹಳದಿ ರೇಖೆ"ಯನ್ನು ದಾಟಿದ ಒಬ್ಬ ಸಶಸ್ತ್ರ ವ್ಯಕ್ತಿ ಇಸ್ರೇಲಿ ಸೈನಿಕರ ಮೇಲೆ ಗುಂಡು ಹಾರಿಸಿದ್ದಾನೆ ಎಂಬುದು ಇಸ್ರೇಲ್ ಸೇನೆಯ ಹೇಳಿಕೆ. ಈ ಘಟನೆಯ ನಂತರ, ದಕ್ಷಿಣ ಗಾಜಾದಲ್ಲಿರುವ ಹಮಾಸ್ ಮೂಲಸೌಕರ್ಯಗಳ ಮೇಲೆ ಪ್ರತಿಯಾಗಿ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ತಿಳಿಸಿದೆ.
https://x.com/IsraeliPM/status/1992264200727781826?s=20
ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಕದನ ವಿರಾಮ ಜಾರಿಗೆ ಬಂದ ದಿನದಿಂದಲೂ ಇಸ್ರೇಲಿ ದಾಳಿಗಳಲ್ಲಿ 300 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಜೀವ ಕಳೆದುಕೊಂಡಿದ್ದಾರೆ. ಇಸ್ರೇಲ್ ಕೈಗೊಂಡ ದಾಳಿಗಳನ್ನು “ವಿರಾಮವನ್ನು ಕುಸಿತಕ್ಕೆ ತಳ್ಳುವ ಉದ್ದೇಶಿತ ಕ್ರಮಗಳು” ಎಂದು ಹಮಾಸ್ ಆರೋಪಿಸಿದ್ದು, ಮಧ್ಯವರ್ತಿಗಳು ತಕ್ಷಣಕ್ಕೆ ಹಸ್ತಕ್ಷೇಪಿಸಿ ದಾಳಿಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಪ್ಯಾಲೆಸ್ಟೀನಿಯನ್ ವಿದೇಶಾಂಗ ಸಚಿವಾಲಯವೂ ದಾಳಿಗಳನ್ನು ಖಂಡಿಸಿ, ಹಿಂಸಾಚಾರಕ್ಕೆ ತಡೆಗಟ್ಟಲು ಅಂತಾರಾಷ್ಟ್ರೀಯ ಸಮುದಾಯದಿಂದ ಒತ್ತಡ ತರಬೇಕು ಎಂದು ಹೇಳಿದೆ.

ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ, ಹಮಾಸ್ ವಿರುದ್ಧ ಕದನ ವಿರಾಮ ಉಲ್ಲಂಘನೆಯ ಆರೋಪ ಮಾಡಿದೆ. ಐಡಿಎಫ್ ಮೇಲಿನ ದಾಳಿಗೆ ಕಾರಣವಾದ ವ್ಯಕ್ತಿಯನ್ನು ಹಮಾಸ್ ಕಳುಹಿಸಿದೆ ಎಂದು ಇಸ್ರೇಲ್ ಹೇಳಿದೆ. ಪ್ರತಿಯಾಗಿ ಹಮಾಸ್‌ನ ಐದು ಹಿರಿಯ ಕಮಾಂಡರ್‌ಗಳನ್ನು ಗುರಿಯಾಗಿಸಿ ಇಸ್ರೇಲ್ ಹತ್ಯೆ ಮಾಡಿರುವುದಾಗಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.