ಹೈಲೈಟ್ಸ್:
ಎಬೋಲಾ ವೈರಸ್ ಆತಂಕ: ಕೇಂದ್ರ ಆರೋಗ್ಯ ಸಚಿವಾಲಯದಿಂದ ಮುನ್ನೆಚ್ಚರಿಕಾ ಮಾರ್ಗಸೂಚಿ ಪ್ರಕಟ
ಎಬೋಲಾ ಪೀಡಿತ ರಾಷ್ಟ್ರಗಳಿಂದ ಬಂದವರು ಕಡ್ಡಾಯವಾಗಿ ಐಸೊಲೇಶನ್‌ನಲ್ಲಿ ಇರಲು ಸೂಚನೆ
ಸೋಂಕು ತಡೆಗೆ ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ನಿಗಾ
ನವದೆಹಲಿ : ಎಬೋಲಾ ವೈರಸ್ ಹರಡುವಿಕೆ ಭೀತಿ ಹಿನ್ನೆಲೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊಸ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಎಬೋಲಾ ಪೀಡಿತ ರಾಷ್ಟ್ರಗಳಿಂದ ಭಾರತಕ್ಕೆ ಬಂದವರು ಅಥವಾ ಆ ದೇಶಗಳ ಮೂಲಕ ಪ್ರಯಾಣಿಸಿದವರು ಕಡ್ಡಾಯವಾಗಿ ಸ್ವಯಂ ಐಸೊಲೇಶನ್‌ನಲ್ಲಿ ಇರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಎಬೋಲಾ ಮುನ್ನೆಚ್ಚರಿಕಾ ಕ್ರಮ
ಭಾರತದಲ್ಲಿ ಈವರೆಗೆ ಯಾವುದೇ ಎಬೋಲಾ ಪ್ರಕರಣಗಳು ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಆದಾಗ್ಯೂ, ಮುಂಜಾಗ್ರತಾ ಕ್ರಮವಾಗಿ ಕಳೆದ 21 ದಿನಗಳಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಉಗಾಂಡಾ ಹಾಗೂ ದಕ್ಷಿಣ ಸುಡಾನ್‌ಗೆ ಭೇಟಿ ನೀಡಿದವರು ಅಥವಾ ಆ ದೇಶಗಳ ಮೂಲಕ ಭಾರತಕ್ಕೆ ಆಗಮಿಸಿದವರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ. ಜ್ವರ, ತಲೆನೋವು, ಸ್ನಾಯು ನೋವು, ವಾಂತಿ, ಅತಿಸಾರ ಅಥವಾ ಅಸ್ಪಷ್ಟ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಪ್ರತ್ಯೇಕಗೊಂಡು ಸ್ಥಳೀಯ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.
ಸಾರ್ವಜನಿಕರ ನೆರವಿಗಾಗಿ ಕೇಂದ್ರ ಸರ್ಕಾರವು ‘1075’ ಉಚಿತ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಆರಂಭಿಕ ಹಂತದಲ್ಲೇ ರೋಗದ ಲಕ್ಷಣಗಳನ್ನು ವರದಿ ಮಾಡಿದರೆ ಸೋಂಕಿನ ಹರಡುವಿಕೆಯನ್ನು ತಡೆಯಲು ಸಾಧ್ಯ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇತ್ತೀಚೆಗೆ ಗುಜರಾತ್‌ನಲ್ಲಿ ಕಾಂಗೋದಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಎಬೋಲಾ ಮಾದರಿಯ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಅವರ ರಕ್ತದ ಮಾದರಿ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿಲ್ಲ ಎಂದು ಗುಜರಾತ್ ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಜಾಗತಿಕ ಆರೋಗ್ಯ ತುರ್ತುಸ್ಥಿತಿ
ಆಫ್ರಿಕಾ ದೇಶಗಳಲ್ಲಿ ಹೆಚ್ಚುತ್ತಿರುವ ಎಬೋಲಾ ಸೋಂಕಿನ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಇದನ್ನು “ಅಂತರರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ” ಎಂದು ಘೋಷಿಸಿದೆ. ಈ ಸಾಂಕ್ರಾಮಿಕದಿಂದ ಈಗಾಗಲೇ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 1,000ಕ್ಕೂ ಅಧಿಕ ಶಂಕಿತ ಪ್ರಕರಣಗಳು ವರದಿಯಾಗಿವೆ.
ಆದರೆ ಕಾಂಗೋ ದೇಶದ ಪೂರ್ವ ಭಾಗದಲ್ಲಿ ಸೋಂಕಿನ ತೀವ್ರತೆ ಸ್ವಲ್ಪ ಮಟ್ಟಿಗೆ ಇಳಿಮುಖವಾಗುತ್ತಿರುವ ಸೂಚನೆಗಳು ಲಭ್ಯವಾಗಿದ್ದು, ಅಲ್ಲಿನ ಪ್ರಮುಖ ವಿಮಾನ ನಿಲ್ದಾಣವನ್ನು ಮರುಾರಂಭಿಸಲಾಗಿದೆ. ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯ ಇನ್ನೂ ಜಾಗತಿಕ ಮಟ್ಟದಲ್ಲಿ ಸವಾಲಾಗಿಯೇ ಉಳಿದಿದೆ.