ವಾಟ್ಸಪ್ ಗ್ರೂಪ್ ಸಂಚು ಮತ್ತು ಪ್ರಚೋದನಕಾರಿ ಸಂದೇಶಗಳು!
ಲಕ್ನೋ: ವೇತನ ಹೆಚ್ಚಳದ ಬೇಡಿಕೆ ಇಟ್ಟು ಉತ್ತರ ಪ್ರದೇಶದ ನೋಯ್ಡಾದಲ್ಲಿ ಖಾಸಗಿ ಕಂಪನಿ ನೌಕರರು ನಡೆಸುತ್ತಿದ್ದ ಪ್ರತಿಭಟನೆ (Noida Protest) ಕುರಿತು ಅಚ್ಚರಿಯ ಮಾಹಿತಿಗಳು ಬಹಿರಂಗವಾಗುತ್ತಿವೆ. ಹಠಾತ್ ರೂಪುಗೊಂಡ ಈ ಪ್ರತಿಭಟನೆ ಹಿಂದೆ ಏನು ನಡೆಯಿತು? ಶಾಂತಿಯುತ ಹೋರಾಟ ಏಕೆ ಹಿಂಸಾತ್ಮಕವಾಯಿತು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗತೊಡಗಿದೆ.
ನೋಯ್ಡಾದ ಕಾರ್ಮಿಕರ ಪ್ರತಿಭಟನೆ (Workers’ protest) ಇಂದಿಗೂ ಮುಂದುವರಿದಿದ್ದು, ಮೊದಲ ಎರಡು ದಿನ ಶಾಂತಿಯುತವಾಗಿದ್ದ ಹೋರಾಟ ಮೂರನೇ ದಿನವಾದ ಸೋಮವಾರ (ಏ.13) ಹಿಂಸಾಚಾರಕ್ಕೆ ತಿರುಗಿತ್ತು. 40,000ಕ್ಕೂ ಹೆಚ್ಚು ಕಾರ್ಮಿಕರು 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿ, ಕಲ್ಲು ತೂರಾಟ ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿದೆ. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು, ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ವಾಟ್ಸಪ್ ಗ್ರೂಪ್: ಪ್ರತಿಭಟನೆಗೆ ರಾತ್ರಿ ಪ್ಲಾನ್
ಪೊಲೀಸರು (Noida Police) ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ, ವಾಟ್ಸಪ್ ಗ್ರೂಪ್‌ಗಳ ಮೂಲಕ ಕ್ಯೂಆರ್ ಕೋಡ್ ಹಂಚಿ ಸಾವಿರಾರು ಜನರನ್ನು ಒಂದೇ ಜಾಲಕ್ಕೆ ಸೇರಿಸಲಾಯಿತು. ‘ಕಾರ್ಮಿಕ ಚಳವಳಿ’ ಎಂಬ ಹೆಸರಿನ ಗುಂಪು ಸೇರಿದಂತೆ ಹಲವು ಗುಂಪುಗಳಲ್ಲಿ ಸಂದೇಶಗಳನ್ನು ಹರಡಲಾಗಿತ್ತು. ಶಾಂತಿಯುತ ಪ್ರತಿಭಟನೆಗೆ ಉದ್ದೇಶಪೂರ್ವಕವಾಗಿ ಪ್ರಚೋದನಕಾರಿ ಭಾಷಣಗಳು, ಪೋಸ್ಟ್‌ಗಳು ಸೇರಿಸಿ ಉದ್ವಿಗ್ನತೆ ಹೆಚ್ಚಿಸಲಾಗಿದೆ ಎಂದು ಶಂಕಿಸಲಾಗಿದೆ. ಮುಂದಿನ ದಿನವೇ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಅಶ್ರುವಾಯು ಸಿಡಿಸಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದರು.
300 ಜನ ಬಂಧನ, 100 ಮಂದಿಗೆ ವಿಚಾರಣೆ
ಹಿಂಸಾಚಾರದ ವೇಳೆ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ 300 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇನ್ನೂ ಆರೋಪಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದೆ.
ಪಾಕ್ ಸಂಪರ್ಕದ ಶಂಕೆ
ಪ್ರತಿಭಟನೆ ವೇಳೆ ಹೊರಗಿನ ಕೆಲ ವ್ಯಕ್ತಿಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಬಂಧನಗಳು ನಡೆದ ಹಿನ್ನೆಲೆ, ಹೊಸ ಮುಖಗಳ ಪತ್ತೆಯಿಂದ ಪಾಕ್ ಸಂಪರ್ಕದ ದಿಕ್ಕಿನಲ್ಲಿ ಪೊಲೀಸರು ತನಿಖೆ ವಿಸ್ತರಿಸಿದ್ದಾರೆ.
8 ಗಂಟೆ ಕೆಲಸ, 20 ಸಾವಿರ ವೇತನ ಬೇಡಿಕೆ
ನೋಯ್ಡಾದ ಕಾರ್ಖಾನೆಗಳಲ್ಲಿ ಕಾರ್ಮಿಕರು ದಿನಕ್ಕೆ 12 ಗಂಟೆಗಳ ಕಾಲ ದುಡಿಯುತ್ತಿದ್ದು, ತಿಂಗಳಿಗೆ 11,000 ರಿಂದ 15,000 ರೂ. ಮಾತ್ರ ಸಂಬಳ ಪಡೆಯುತ್ತಿದ್ದಾರೆ ಎಂಬ ಆರೋಪ ಇದೆ. ಕನಿಷ್ಠ ವೇತನ ನಿಯಮಗಳ ಉಲ್ಲಂಘನೆಗೂ ಕಂಪನಿಗಳ ವಿರುದ್ಧ ಆರೋಪಗಳು ಕೇಳಿಬಂದಿವೆ. ಹೀಗಾಗಿ ಕೆಲಸದ ಅವಧಿಯನ್ನು 8 ಗಂಟೆಗೆ ಇಳಿಸಿ, ವೇತನವನ್ನು 20-25 ಸಾವಿರ ರೂ.ಗೆ ಹೆಚ್ಚಿಸುವಂತೆ ಕಾರ್ಮಿಕರು ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.