ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ; ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ

ಹೊನ್ನಾಳಿ: ಹಿಂದೂ ಮಹಾಸಭಾ ಗೌರಿ ಗಣೇಶ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 50ನೇ ವರ್ಷದ ಗೌರಿ ಗಣೇಶ ಮೂರ್ತಿಯ ವಿಸರ್ಜನಾ ಮಹೋತ್ಸವ ಭಾನುವಾರ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯಿತು. ಬೆಳಗ್ಗಿನಿಂದಲೇ ಬಿಸಿಲಿನ ತೀವ್ರತೆ ಹೆಚ್ಚಿದ್ದರೂ ಭಕ್ತರ ಉತ್ಸಾಹ ಕುಗ್ಗದೆ, ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು.
ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ, ಗೌರಿ ಗಣೇಶ ಮೂರ್ತಿಗೆ ಆರತಿ ಬೆಳಗಿದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಗಣಪತಿ ಜಯಘೋಷಗಳನ್ನು ಮೊಳಗಿಸಿದರು.
ಕಲಾ ತಂಡಗಳ ಮೆರುಗು
ಶೋಭಾಯಾತ್ರೆಯಲ್ಲಿ ಡೊಳ್ಳು ಕುಣಿತ, ಚಂಡೆ ವಾದನ, ನಾಸಿಕ್ ಡೋಲ್ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರುಗು ತಂದವು. ಯುವಕರು ಹಾಗೂ ಭಕ್ತರು ಕಲಾ ತಂಡಗಳ ಪ್ರದರ್ಶನಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಹೊನ್ನಾಳಿ ಪಟ್ಟಣದ ವಿವಿಧ ಪ್ರಮುಖ ಸ್ಥಳಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ಆದಿಶಕ್ತಿ ಪ್ರತಿಮೆ ಹಾಗೂ ಟಿ.ಬಿ. ವೃತ್ತದಲ್ಲಿನ ಬಜರಂಗಬಲಿ ಪ್ರತಿಮೆ ಗಮನ ಸೆಳೆದವು. ಮೆರವಣಿಗೆಯ ಮಾರ್ಗದುದ್ದಕ್ಕೂ ಕೇಸರಿ ಧ್ವಜಗಳು ಹಾಗೂ ಬಾವುಟಗಳು ಕಂಡುಬಂದವು.
ಪ್ರಮುಖ ಬೀದಿಗಳಲ್ಲಿ ಸಂಚಾರ
ಶ್ರೀ ಹಳದಮ್ಮ ದೇವಸ್ಥಾನದಿಂದ ಆರಂಭವಾದ ಶೋಭಾಯಾತ್ರೆ ಮಾರಿಕೊಪ್ಪ ರಸ್ತೆ, ಹಿರೇಕಲ್ಮಠ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಕೆನರಾ ಬ್ಯಾಂಕ್ ರಸ್ತೆ, ದೊಡ್ಡಪೇಟೆ ಹಾಗೂ ಕುಂಬಾರ ಬೀದಿ ಮಾರ್ಗವಾಗಿ ಸಾಗಿತು.
ಬಳಿಕ ಶೋಭಾಯಾತ್ರೆ ತುಂಗಭದ್ರಾ ನದಿ ತಲುಪಿದ್ದು, ಭಕ್ತರ ಸಮ್ಮುಖದಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಭಕ್ತರಿಗೆ ಅನ್ನಸಂತರ್ಪಣೆ
ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗಾಗಿ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಶೋಭಾಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು. ಒಬ್ಬ ಡಿವೈಎಸ್ಪಿ, ಮೂವರು ಸಿಪಿಐಗಳು, ಎರಡು ಡಿಎಆರ್ ತುಕಡಿಗಳು ಹಾಗೂ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ತಿಳಿಸಲಾಗಿದೆ.
ವೃತ್ತ ನಿರೀಕ್ಷಕ ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಡ್ರೋನ್ ಮೂಲಕ ಕಣ್ಗಾವಲು ಇರಿಸಲಾಗಿದ್ದು, ಸೂಕ್ಷ್ಮ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಸಂಚಾರ ಬದಲಾವಣೆಗಳನ್ನೂ ಮಾಡಲಾಗಿತ್ತು.
ಗಣೇಶೋತ್ಸವದ ಪ್ರಮುಖ ಘಟ್ಟವಾದ ವಿಸರ್ಜನಾ ಶೋಭಾಯಾತ್ರೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿದ್ದು, ಸಮಿತಿ ಪದಾಧಿಕಾರಿಗಳು, ಸ್ವಯಂಸೇವಕರು ಹಾಗೂ ಪೊಲೀಸ್ ಸಿಬ್ಬಂದಿಯ ಸಹಕಾರದಲ್ಲಿ ಕಾರ್ಯಕ್ರಮ ಸಂಪನ್ನಗೊಂಡಿತು.
ವರದಿ: ಪ್ರಭಾಕರ್ ಮುದ್ದಣ್ಣರ್