ಹಾಸನ: ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಹಾಸನ ತಾಲೂಕಿನ ಶಾಂತಿಗ್ರಾಮ ಸಮೀಪ ಚಲಿಸುತ್ತಿರುವಾಗಲೇ ದಿಢೀರ್ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಎಲ್ಲಾ 36 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ.
ಶುಕ್ರವಾರ ರಾತ್ರಿ 8.45ರ ಸುಮಾರಿಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ‘ಭರತ್’ ಹೆಸರಿನ ಖಾಸಗಿ ಬಸ್ ಶಾಂತಿಗ್ರಾಮ ಬಳಿ ಈ ಅವಘಡಕ್ಕೆ ಒಳಗಾಗಿದೆ. ಬಸ್ ಚಲಿಸುತ್ತಿರುವ ವೇಳೆ ಟಯರ್ ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ಕ್ಷಣಾರ್ಧದಲ್ಲೇ ವಾಹನಕ್ಕೆ ಬೆಂಕಿ ಹಬ್ಬಿದೆ ಎನ್ನಲಾಗಿದೆ.
ಟಯರ್ ಸ್ಫೋಟವಾದ ತಕ್ಷಣ ಚಾಲಕ ತಕ್ಷಣದ ಎಚ್ಚರಿಕೆಯಿಂದ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಬಳಿಕ ತುರ್ತು ಪರಿಸ್ಥಿತಿಯನ್ನು ಅರಿತು, ಬಸ್ಸಿನಲ್ಲಿದ್ದ ಎಲ್ಲಾ 36 ಪ್ರಯಾಣಿಕರನ್ನು ತಕ್ಷಣವೇ ಕೆಳಗಿಳಿಯುವಂತೆ ಸೂಚಿಸಿದ್ದಾರೆ.
ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿ ಸಂಪೂರ್ಣವಾಗಿ ಧಗಧಗನೆ ಹೊತ್ತಿ ಉರಿದಿದೆ. ಚಾಲಕನ ಸೂಕ್ತ ನಿರ್ಧಾರ ಮತ್ತು ತಕ್ಷಣದ ಕ್ರಮದಿಂದ ದೊಡ್ಡ ಪ್ರಮಾಣದ ಪ್ರಾಣಹಾನಿ ತಪ್ಪಿದಂತಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ ಆಗಾಗಲೇ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಈ ಘಟನೆಯಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.