ಗುತ್ತಿನಾಡು: ಗುತ್ತಿನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಗುತ್ತಿನಾಡು ಗ್ರಾಮದ ಸಂಘದ ಆವರಣದಲ್ಲಿ ನಡೆಯಿತು.
ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಬಳಿಕ ಸಂಘದ 2025–26ನೇ ಸಾಲಿನ ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಎಸ್.ಎಸ್. ಅವರು ಸಭೆಯ ಮುಂದೆ ಮಂಡಿಸಿ
ಓದಿ ವಿವರಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರು ಶ್ರೀ ನಾಗರಾಜ್ ಹನುಮಂತಪ್ಪ ಅವರು, ಸಂಘದಲ್ಲಿ ಒಂದು ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಪ್ರತಿಯೊಬ್ಬ ಸದಸ್ಯರೂ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಹೆಚ್ಚಿನ ಸಾಲ ಪಡೆಯಲು ಇಚ್ಛಿಸುವ ರೈತರು ಅಗತ್ಯ ದಾಖಲೆಗಳನ್ನು ತಪ್ಪದೇ ಒದಗಿಸಬೇಕು. ರೈತರು ಪಡೆದ ಬೆಳೆ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಆರ್ಥಿಕ ಚಟುವಟಿಕೆಗಳಿಗೆ ಸಹಕರಿಸಬೇಕು. ಸಾಲ ಮರುಪಾವತಿ ಸರಿಯಾದ ಸಮಯಕ್ಕೆ ನಡೆದರೆ ಅರ್ಹ ರೈತರಿಗೆ ಹೊಸ ಸಾಲಗಳನ್ನು ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸದಸ್ಯರು ಸಂಘದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಇಡುವುದರ ಜೊತೆಗೆ ಸಂಘದ ವಿವಿಧ ವ್ಯವಹಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅಧ್ಯಕ್ಷರು ಕರೆ ನೀಡಿದರು.
ರೈತರ ಅನುಕೂಲಕ್ಕಾಗಿ ಸಂಘದಲ್ಲಿ ರಸಗೊಬ್ಬರ ವ್ಯವಸ್ಥೆ ಮಾಡಿದ್ದು ಸದುಪಯೋಗ ಪಡಿಸಿಕೊಳ್ಳಬೇಕು.ಮುಂದಿನ ದಿನಗಳಲ್ಲಿ ಸದಸ್ಯರು ಹಾಗೂ ರೈತರಿಗೆ ಇನ್ನಷ್ಟು ಸೇವೆಗಳನ್ನು ಒದಗಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಹಾಗೂ ಸಂಘದ ಆಡಳಿತ ಮಂಡಳಿಯವರು ಸಹಕಾರ ಮತ್ತು ಅಭಯಹಸ್ತ ನೀಡಬೇಕು ಎಂದು ಅಧ್ಯಕ್ಷರು ನಾಗರಾಜ್ ಹನುಮಂತಪ್ಪ ಮನವಿ ಮಾಡಿದರು.
ಸದಸ್ಯರ ಸಲಹೆಗಳು ಸಂಘದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದ್ದು, ಸಂಘದ ಶೇರು ಬಂಡವಾಳ ಕಡಿಮೆಯಿರುವ ಹಿನ್ನೆಲೆಯಲ್ಲಿ ಶೇರು ಬಂಡವಾಳವನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ಚಿದಾನಂದ ಮೂರ್ತಿ ಅವರು, ಸದಸ್ಯರು ಸುಸ್ತಿ ಸಾಲವನ್ನು ಪಾವತಿಸಿದರೆ ಅಸಲು ಮತ್ತು ಬಡ್ಡಿ ಮೊತ್ತವನ್ನು ಸೇರಿಸಿ ಸಾಲವನ್ನು ನವೀಕರಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ರೈತರು ಸಾಲ ಪಡೆಯುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸರಿಯಾಗಿ ಒದಗಿಸಿ, ಸಂಘದ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಘದ ಮೂಲಕ ರೈತರು ಹಾಗೂ ಸದಸ್ಯರಿಗೆ ಇನ್ನೂ ಹಲವು ಸೇವೆಗಳನ್ನು ಒದಗಿಸುವ ಉದ್ದೇಶವಿದ್ದು, ಸದಸ್ಯರು ಸಂಘದೊಂದಿಗೆ ನಿರಂತರವಾಗಿ ವ್ಯವಹರಿಸಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗದವರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.