ಲೇಹ್: Ladakhನ ಲೇಹ್ ಸಮೀಪದ ಟ್ಯಾಂಗ್ಸ್ಟೆ ಪರ್ವತ ಪ್ರದೇಶದಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದ ಮೂವರು ಹಿರಿಯ ಸೇನಾ ಅಧಿಕಾರಿಗಳು ಸಣ್ಣ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೇ 20ರಂದು ನಡೆದ ಈ ಅವಘಡದ ವೇಳೆ 3ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಚಿನ್ ಮೆಹ್ತಾ ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್‌ನ್ನು ಲೆಫ್ಟಿನೆಂಟ್ ಕರ್ನಲ್ ಹಾಗೂ ಒಬ್ಬ ಮೇಜರ್ ಪೈಲಟ್‌ಗಳಾಗಿ ನಿಯಂತ್ರಿಸುತ್ತಿದ್ದರು. ಅಪಘಾತ ಸಂಭವಿಸಿದ ತಕ್ಷಣವೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಿವೆ.
ಅಪಘಾತದ ಬಳಿಕ ಮೇಜರ್ ಜನರಲ್ ಸಚಿನ್ ಮೆಹ್ತಾ ಅವರು ಘಟನಾ ಸ್ಥಳದಲ್ಲೇ ಸೆಲ್ಫಿ ತೆಗೆದುಕೊಂಡಿದ್ದು, ಆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸೈನಿಕರ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಈ ಘಟನೆ ಉದಾಹರಣೆಯಾಗಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷವೇ ಅಥವಾ ಪ್ರತಿಕೂಲ ಹವಾಮಾನವೇ ಕಾರಣ ಎಂಬುದರ ಕುರಿತು ಭಾರತೀಯ ಸೇನೆ ಉನ್ನತ ಮಟ್ಟದ ತನಿಖೆ ಆರಂಭಿಸಿದೆ.