ನವದೆಹಲಿ: ಅಮೆರಿಕಾ-ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆ ಮಾತ್ರವಲ್ಲದೆ ಭಾರತದ ವಿಮಾನಯಾನ ವಲಯಕ್ಕೂ ದೊಡ್ಡ ಹೊಡೆತ ನೀಡತೊಡಗಿದೆ.
ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ದರದಲ್ಲಿ ಭಾರೀ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಏರ್‌ಲೈನ್‌ಗಳಾದ ಏರ್ ಇಂಡಿಯಾ ಹಾಗೂ ಇಂಡಿಗೋ ಜೂನ್ 1ರಿಂದ ಮುಂದಿನ ಮೂರು ತಿಂಗಳು ದೇಶೀಯ ವಿಮಾನ ಸೇವೆಗಳಲ್ಲಿ ಕಡಿತ ತರಲು ತೀರ್ಮಾನಿಸಿವೆ.
ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ 90 ಶೇಕಡಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಈ ಎರಡು ಕಂಪನಿಗಳು, ಪ್ರಯಾಣಿಕರ ಬೇಡಿಕೆ ಇಳಿಕೆ ಹಾಗೂ ಹೆಚ್ಚಿದ ಇಂಧನ ವೆಚ್ಚದ ಒತ್ತಡದಿಂದ ಕಾರ್ಯಾಚರಣೆ ಮಿತಿಗೊಳಿಸಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ತನ್ನ ದೇಶೀಯ ಹಾರಾಟಗಳಲ್ಲಿ ಸುಮಾರು 15 ಶೇಕಡಾ ಕಡಿತ ತರಲಿದ್ದು, ಇಂಡಿಗೋ 5ರಿಂದ 7 ಶೇಕಡಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ಸುಮಾರು 40 ಶೇಕಡಾ ಪಾಲು ATF ಮೇಲೆಯೇ ಖರ್ಚಾಗುತ್ತದೆ. ಯುದ್ಧ ಪರಿಸ್ಥಿತಿಯ ಬಳಿಕ ATF ದರ ಕಿಲೋಲೀಟರ್‌ಗೆ ರೂ.80 ಸಾವಿರದಿಂದ ರೂ.1 ಲಕ್ಷದ ಗಡಿ ದಾಟಿದೆ ಎಂದು ಏರ್ ಇಂಡಿಯಾ ಮೂಲಗಳು ಹೇಳಿವೆ. ರಾಜ್ಯಾವಾರು VAT ದರ ವ್ಯತ್ಯಾಸವೂ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಅಂತರರಾಷ್ಟ್ರೀಯ ವಿಮಾನ ಸೇವೆಗಳಲ್ಲಿ ಕಡಿತ ಘೋಷಿಸಿರುವ ಏರ್ ಇಂಡಿಯಾ, ಯಾವುದೇ ಮಾರ್ಗವನ್ನು ಸಂಪೂರ್ಣ ಸ್ಥಗಿತಗೊಳಿಸದೇ ಕೆಲವು ಪ್ರಮುಖ ಮಾರ್ಗಗಳಲ್ಲಿ ಮಾತ್ರ ಹಾರಾಟಗಳ ಸಂಖ್ಯೆಯನ್ನು ಇಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮುಂಬೈ-ಅಹಮದಾಬಾದ್, ನಾಗ್ಪುರ, ಪಾಟ್ನಾ ಹಾಗೂ ಭೋಪಾಲ್ ಮಾರ್ಗಗಳ ಸೇವೆಗಳು ಕಡಿಮೆಯಾಗಲಿದ್ದು, ದೆಹಲಿ-ಹೈದರಾಬಾದ್, ಬೆಂಗಳೂರು ಮತ್ತು ಕೊಲ್ಕತ್ತಾ ನಡುವಿನ ವಿಮಾನಗಳ ಸಂಖ್ಯೆಯಲ್ಲೂ ಇಳಿಕೆ ಆಗಲಿದೆ. ದಕ್ಷಿಣ ಭಾರತದ ಹಲವು ಮಾರ್ಗಗಳ ರಿಟರ್ನ್ ಫ್ಲೈಟ್‌ಗಳ ಮೇಲೂ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಅಂತರರಾಷ್ಟ್ರೀಯ ವಿಮಾನ ಸೇವೆಗಳಲ್ಲಿ ಕಡಿತವಾಗುತ್ತಿರುವ ಹಿನ್ನೆಲೆ ದೇಶೀಯ ಸಂಪರ್ಕ ವಿಮಾನಗಳ ಬೇಡಿಕೆಯೂ ಕುಸಿಯಲಿದೆ ಎಂದು ಏರ್‌ಲೈನ್ ಸಂಸ್ಥೆಗಳು ಅಂದಾಜಿಸಿವೆ.
ವಿಶೇಷವಾಗಿ ದೆಹಲಿ ಹಾಗೂ ಮುಂಬೈ ಸಂಪರ್ಕದ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜೂನ್ 1ರಿಂದ ಆಗಸ್ಟ್ ಅಂತ್ಯದವರೆಗೆ ಈ ಸೇವಾ ಕಡಿತ ಜಾರಿಯಲ್ಲಿರಲಿದ್ದು, ಕೆಲವು ವಿಮಾನಗಳ ಟಿಕೆಟ್ ಬುಕ್ಕಿಂಗ್‌ಗಳನ್ನು ಈಗಾಗಲೇ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಲಾ ರಜೆ ಅವಧಿ ಮುಗಿದ ಬಳಿಕ ಸಾಮಾನ್ಯವಾಗಿ ಪ್ರಯಾಣಿಕರ ಸಂಖ್ಯೆ ಇಳಿಯುವುದು ಕೂಡ ಈ ನಿರ್ಧಾರಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ಇಂಡಿಗೋ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿದಿನ ಸುಮಾರು 1,950 ವಿಮಾನಗಳನ್ನು ನಿರ್ವಹಿಸುವ ಸಂಸ್ಥೆಗೆ ಸಣ್ಣ ಪ್ರಮಾಣದ ಸೇವಾ ಕಡಿತವೂ ನೂರಾರು ವಿಮಾನ ರದ್ದುಪಡಿಸುವಿಕೆಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ವಿಮಾನಯಾನ ಕ್ಷೇತ್ರಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಏಪ್ರಿಲ್ 1, 2026ರಿಂದ ದೇಶೀಯ ವಿಮಾನ ಸಂಸ್ಥೆಗಳಿಗೆ ATF ದರ ಏರಿಕೆಯನ್ನು 25 ಶೇಕಡಕ್ಕೆ ಮಿತಿಗೊಳಿಸಿತ್ತು. ಜೊತೆಗೆ ಪಾರ್ಕಿಂಗ್ ಶುಲ್ಕ ಕಡಿತ ಮತ್ತು ತುರ್ತು ಸಾಲ ಸೌಲಭ್ಯಗಳನ್ನೂ ಘೋಷಿಸಿತ್ತು.
ಇದಕ್ಕೆ ಪೂರಕವಾಗಿ ದೆಹಲಿ ಸರ್ಕಾರ ATF ಮೇಲಿನ VAT ಅನ್ನು 25 ಶೇಕಡದಿಂದ 7 ಶೇಕಡಕ್ಕೆ ಇಳಿಸಿದ್ದು, ಮಹಾರಾಷ್ಟ್ರ ಸರ್ಕಾರವೂ 18 ಶೇಕಡದಿಂದ 7 ಶೇಕಡಕ್ಕೆ ಕಡಿತಗೊಳಿಸಿದೆ.