ಸುಸ್ಥಿರ ನಗರ ಜಲ ನಿರ್ವಹಣೆ ಹಾಗೂ ಸರ್ಕ್ಯುಲರ್ ಎಕಾನಮಿ ಪರಿಕಲ್ಪನೆಯನ್ನು ಜಾರಿಗೆ ತರಲು ಮುಂದಾಗಿರುವ ಜಲಮಂಡಳಿ, ಇದೀಗ ಕೊಳಚೆ ನೀರಿನ ತ್ಯಾಜ್ಯವನ್ನು ಲಾಭದಾಯಕ ಸಂಪನ್ಮೂಲವಾಗಿ ರೂಪಾಂತರಿಸಲು ಯೋಜನೆ ರೂಪಿಸಿದೆ. ತನ್ನ ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಬಳಸಿ ಮುಂದಿನ 20 ವರ್ಷಗಳಲ್ಲಿ ಸುಮಾರು 120 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸುವ ಗುರಿಯನ್ನು ಹೊಂದಿದೆ.
ಹೈಲೈಟ್ಸ್:
ಕೊಳಚೆ ನೀರಿನ ತ್ಯಾಜ್ಯದಿಂದ ಆದಾಯ ಸೃಷ್ಟಿಸಲು ಜಲಮಂಡಳಿ ಮಹತ್ವಾಕಾಂಕ್ಷಿ ಯೋಜನೆ
ಕಚ್ಚಾ ಜೈವಿಕ ಅನಿಲವನ್ನು ಮೌಲ್ಯವರ್ಧಿತ ಕಂಪ್ರೆಸ್ಡ್ ಬಯೋ-ಗ್ಯಾಸ್‌ಗೆ ಪರಿವರ್ತನೆ
ಮುಂದಿನ ಎರಡು ದಶಕಗಳಲ್ಲಿ 120 ಕೋಟಿ ರೂ. ಆದಾಯ ನಿರೀಕ್ಷೆ
ಬೆಂಗಳೂರು: ಸುಸ್ಥಿರತೆ ಮತ್ತು ಪರಿಸರ ಸ್ನೇಹಿ ಅಭಿವೃದ್ದಿ ಗುರಿಗಳನ್ನು ಮನದಟ್ಟು ಮಾಡಿಕೊಂಡಿರುವ ಜಲಮಂಡಳಿ, ತ್ಯಾಜ್ಯ ನೀರನ್ನು ಆರ್ಥಿಕ ಸಂಪತ್ತಾಗಿ ಪರಿವರ್ತಿಸುವ ದಿಟ್ಟ ಹೆಜ್ಜೆ ಇಟ್ಟಿದೆ. ನಗರದ ಐದು ಪ್ರಮುಖ ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಕಚ್ಚಾ ಜೈವಿಕ ಅನಿಲವನ್ನು ಕಂಪ್ರೆಸ್ಡ್ ಬಯೋ-ಗ್ಯಾಸ್ ಆಗಿ ಮೇಲ್ದರ್ಜೆಗೆತ್ತುವ ಮೂಲಕ ಮುಂದಿನ 20 ವರ್ಷಗಳಲ್ಲಿ ಸುಮಾರು 120 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಿದೆ.
ಬಯೋ-ಡೈಜೆಸ್ಟರ್:
ಸೂರತ್ ನಗರದಂತಹ ಕಡೆಗಳಲ್ಲಿ 120 ಎಂಎಲ್‌ಡಿ ಸಾಮರ್ಥ್ಯದ ಯೋಜನೆಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ, ಬೆಂಗಳೂರು ಜಲಮಂಡಳಿ 550 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರನ್ನು ಬಳಸಿಕೊಂಡು ಇನ್ನಷ್ಟು ಬೃಹತ್ ಮಟ್ಟದಲ್ಲಿ ಯೋಜನೆ ಜಾರಿಗೊಳಿಸುತ್ತಿದೆ. ನಗರದಲ್ಲಿನ ಎಲ್ಲ ಬಯೋ-ಡೈಜೆಸ್ಟರ್‌ಗಳಿರುವ ಎಸ್‌ಟಿಪಿಗಳಲ್ಲಿ ಈ ತಂತ್ರಜ್ಞಾನವನ್ನು ವಿಸ್ತರಿಸುವ ಉದ್ದೇಶವಿದೆ.
ಪ್ರಸ್ತುತ ಈ ಘಟಕಗಳಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ಅದನ್ನು ಶುದ್ಧೀಕರಿಸಿ ನಗರ ಅನಿಲ ಜಾಲಕ್ಕೆ ಪೂರೈಸುವುದು ಅಥವಾ ಸಾರಿಗೆ ಇಂಧನವಾಗಿ ಬಳಸುವ ಯೋಜನೆಯಿದೆ. ಇದರ ಮೂಲಕ ಜಲಮಂಡಳಿಗೆ 120 ಕೋಟಿ ರೂ. ಹೆಚ್ಚುವರಿ ಆದಾಯ ಸಾಧ್ಯವಾಗಲಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ:
ಪಿಪಿಪಿ ಮಾದರಿಯಲ್ಲಿ ಜಾರಿಯಾಗುತ್ತಿರುವ ಈ ಯೋಜನೆಯಲ್ಲಿ ಖಾಸಗಿ ಪಾಲುದಾರರು ಸುಮಾರು 85 ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ಕಾರ್ಯಾಚರಣೆ-ನಿರ್ವಹಣಾ ವೆಚ್ಚಗಳನ್ನು ಭರಿಸಲಿದ್ದಾರೆ. ಜಲಮಂಡಳಿ ತನ್ನ ಎಸ್‌ಟಿಪಿ ಆವರಣದಲ್ಲಿ ಸುಮಾರು 13,000 ಚದರ ಮೀಟರ್ ಜಾಗ ಒದಗಿಸಲಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪುಗೊಂಡಿದ್ದು, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಮಹತ್ವದ ಹೆಜ್ಜೆಯಾಗಿದೆ. 550 ಎಂಎಲ್‌ಡಿ ತ್ಯಾಜ್ಯ ನೀರನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ಕಂಪ್ರೆಸ್ಡ್ ಬಯೋ-ಗ್ಯಾಸ್ ಉತ್ಪಾದಿಸುವ ಈ ಯೋಜನೆ ದೇಶದಲ್ಲೇ ಅತಿದೊಡ್ಡದು. ಪಿಪಿಪಿ ಮಾದರಿಯಿಂದ ಯಾವುದೇ ಬಂಡವಾಳ ಹೂಡಿಕೆ ಇಲ್ಲದೇ 120 ಕೋಟಿ ರೂ. ಆದಾಯ ಗಳಿಸುವ ಅವಕಾಶ ಸೃಷ್ಟಿಯಾಗಿದ್ದು, ಇದು ನಗರದ ಆರ್ಥಿಕ ಸ್ಥಿತಿ ಹಾಗೂ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.