ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿರುವ ಅಣ್ಣಾಮಲೈ, ಬಿಜೆಪಿಯೊಂದಿಗಿನ ಆರು ವರ್ಷಗಳ ರಾಜಕೀಯ ಪಯಣಕ್ಕೆ ತೆರೆ ಎಳೆದಿದ್ದಾರೆ. ಎಐಎಡಿಎಂಕೆ ಮತ್ತೆ ಎನ್‌ಡಿಎ ಮೈತ್ರಿಗೆ ಸೇರ್ಪಡೆಯಾದ ಬಳಿಕ ಪಕ್ಷದ ಉನ್ನತ ನಾಯಕತ್ವ ಅಣ್ಣಾಮಲೈ ಅವರನ್ನು ಕಡೆಗಣಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ತ್ರಿಭಾಷಾ ನೀತಿ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಅಣ್ಣಾಮಲೈ, ಇತ್ತೀಚಿನ ದಿನಗಳಲ್ಲಿ ಪಕ್ಷದ ಪ್ರಮುಖ ಸಭೆಗಳಿಂದಲೂ ದೂರ ಉಳಿದಿದ್ದರು.
ಇದೀಗ ಅವರು ‘ಮಕ್ಕಳ್ ಶಕ್ತಿ ಇಯಕ್ಕಂ’ ಎಂಬ ಹೊಸ ಜನಪರ ಚಳವಳಿ ಆರಂಭಿಸಲು ಸಜ್ಜಾಗಿದ್ದಾರೆ ಎಂಬ ವರದಿಗಳು ರಾಜಕೀಯ ಕುತೂಹಲ ಹೆಚ್ಚಿಸಿವೆ. “ಭಯವಿಲ್ಲದ ಮನಸ್ಸಿಗೆ ಮಿತಿಗಳಿಲ್ಲ” ಎಂಬ ಸಂದೇಶವಿರುವ ಪೋಸ್ಟರ್‌ಗಳು ಕೊಯಮತ್ತೂರಿನಲ್ಲಿ ಕಾಣಿಸಿಕೊಂಡಿರುವುದು ಅವರ ಮುಂದಿನ ರಾಜಕೀಯ ಹೆಜ್ಜೆಯ ಸುಳಿವಾಗಿ ಪರಿಣಮಿಸಿದೆ. 2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿಯನ್ನು ಬಲಿಷ್ಠಗೊಳಿಸಿದ್ದ ಅಣ್ಣಾಮಲೈ ಅವರ ನಿರ್ಗಮನ, ರಾಜ್ಯ ಬಿಜೆಪಿ ರಾಜಕೀಯ ಸಮೀಕರಣಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.