ನವದೆಹಲಿ: ಜಮೀರ್ ಅಹಮದ್ (Zameer Ahmed) ಮಾತನಾಡಿದ ಆಡಿಯೋ ಇದೀಗ ಬಹಿರಂಗವಾಗಿದೆ. ಬಿಜೆಪಿಗೆ ಲಾಭವಾಗುವ ರೀತಿಯಲ್ಲಿ ಅವರು ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎಸ್.ಎಸ್ ಮಲ್ಲಿಕಾರ್ಜುನ್ (S.S Mallikarjun) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ದಾವಣಗೆರೆ ಉಪಚುನಾವಣೆ (Davanagere Byelection) ಸಂಬಂಧ ಜಮೀರ್ ಮತ್ತು ಸಿರಾಜ್ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದರು. ಜಮೀರ್ ಅಹಮದ್ ಮಾತನಾಡಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಬಂದಿದೆ. ಈ ಎಲ್ಲ ಬೆಳವಣಿಗೆಗಳನ್ನು ಹೈಕಮಾಂಡ್ ನಾಯಕರು ಗಮನಿಸುತ್ತಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ನಾನು ಯಾರನ್ನಾದರೂ ಉಚ್ಛಾಟನೆ ಮಾಡಬೇಕು ಎಂದು ಹೇಳುವ ಮಟ್ಟದ ರಾಜಕೀಯ ಮಾಡುವುದಿಲ್ಲ. ಪಕ್ಷದ ಹಿರಿಯ ನಾಯಕರು ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.