ಪಾಟ್ನಾ: 14 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಗಂಗಾ ನದಿಯಲ್ಲಿ ಮುಳುಗಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 5 ಮಂದಿ ನಾಪತ್ತೆಯಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪ್ರವಾಹ ಪರಿಸ್ಥಿತಿಯ ನಡುವೆ ಉಮಾನಾಥ್ ಗಂಗಾ ಘಾಟ್ ಬಳಿ ನೀರಿನ ಮಟ್ಟ ಏರಿಕೆಯಾಗಿದ್ದು, ಬಲವಾದ ಗಾಳಿಯಿಂದ ದೋಣಿ ಪಲ್ಟಿಯಾಗಿದೆ. ಸ್ಥಳೀಯರು ಹಾಗೂ ಎಸ್‌ಡಿಆರ್‌ಎಫ್ ತಂಡದ ನೆರವಿನಿಂದ 7 ಮಂದಿಯನ್ನು ರಕ್ಷಿಸಲಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಸಾಮರ್ಥ್ಯ ಮೀರಿದ ಪ್ರಯಾಣಿಕರು ಹಾಗೂ ರಕ್ಷಣಾ ಕವಚಗಳ ಕೊರತೆಯೇ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ. ಮೃತರನ್ನು ನೀಲಂ ಕುಮಾರಿ (30) ಹಾಗೂ ಕಾಶಿ ಕುಮಾರ್ (15) ಎಂದು ಗುರುತಿಸಲಾಗಿದ್ದು, ಐವರಿಗಾಗಿ ಶೋಧಕಾರ್ಯ ಮುಂದುವರಿದಿದೆ.