ನವದೆಹಲಿ: ದೇಶದ ದೇವಾಲಯಗಳ ಚಿನ್ನವನ್ನು ಹಣೀಕರಣಗೊಳಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ದೇವಾಲಯ ಟ್ರಸ್ಟ್‌ಗಳು ಅಥವಾ ಧಾರ್ಮಿಕ ಸಂಸ್ಥೆಗಳ ಚಿನ್ನ ಬಳಸಿ ಯೋಜನೆ ಜಾರಿಗೆ ತರಲಾಗುತ್ತಿದೆ ಎಂಬ ವದಂತಿಗಳು ಸಂಪೂರ್ಣ ಸುಳ್ಳು ಹಾಗೂ ದಾರಿತಪ್ಪಿಸುವಂತಿವೆ ಎಂದು ಹೇಳಿದೆ. ದೇವಾಲಯಗಳ ಗುಮ್ಮಟ, ಬಾಗಿಲು ಅಥವಾ ಇತರೆ ಭಾಗಗಳಲ್ಲಿರುವ ಚಿನ್ನವನ್ನು ರಾಷ್ಟ್ರದ ಚಿನ್ನದ ನಿಕ್ಷೇಪದ ಭಾಗವೆಂದು ಪರಿಗಣಿಸಲಾಗುತ್ತದೆ ಎಂಬ ಮಾತುಗಳನ್ನೂ ಸಚಿವಾಲಯ ತಳ್ಳಿ ಹಾಕಿದೆ. ಇಂತಹ ಮಾಹಿತಿಗೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಜನರು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯಬೇಕು ಎಂದು ಮನವಿ ಮಾಡಿದೆ. ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಕುರಿತ ಮಾಹಿತಿ ಅಧಿಕೃತ ಪ್ರಕಟಣೆಗಳು ಹಾಗೂ ಸರ್ಕಾರಿ ವೆಬ್‌ಸೈಟ್‌ಗಳ ಮೂಲಕವೇ ಪ್ರಕಟವಾಗುತ್ತದೆ ಎಂದು ತಿಳಿಸಿದೆ. ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ತಪ್ಪು ಮಾಹಿತಿ ಸಾರ್ವಜನಿಕರಲ್ಲಿ ಗೊಂದಲ ಮತ್ತು ಆತಂಕ ಉಂಟುಮಾಡುವ ಸಾಧ್ಯತೆ ಇರುವುದರಿಂದ ಇಂತಹ ಸುಳ್ಳು ಸುದ್ದಿಗಳನ್ನು ಹರಡಬಾರದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.