ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿಗೆ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಒಳನಾಡು ಹಾಗೂ ಕರಾವಳಿ ಪ್ರದೇಶಗಳ ಬಹುತೇಕ ಕಡೆಗಳಲ್ಲಿ ಗುಡುಗು-ಮಿಂಚು ಸಹಿತ ಜೋರು ಮಳೆ ಸುರಿಯುವ ನಿರೀಕ್ಷೆ ಇದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ತಿಳಿಸಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.