ಬೆಂಗಳೂರು: ವಿಮಾನದಲ್ಲಿ ಆಗಮಿಸಿ ಬಿಎಸ್‌ಎನ್‌ಎಲ್ (BSNL) ಲಕ್ಷಾಂತರ ರೂಪಾಯಿ ಮೌಲ್ಯದ ತಾಮ್ರದ ತಂತಿಗಳನ್ನು ಕಳ್ಳತನ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಅಂತರಾಜ್ಯ ಕಳ್ಳರ ಗ್ಯಾಂಗ್ ಅನ್ನು ಯಶವಂತಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಪ್ರದೇಶದ ನಿವಾಸಿಗಳಾದ ರವಿ ಚವ್ಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರು ಮಾತ್ರವಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಇದೇ ಮಾದರಿಯ ಕಳ್ಳತನ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಸಾರ್ವಜನಿಕರಿಗೆ ಅನುಮಾನ ಬಾರದಂತೆ ಬಿಎಸ್‌ಎನ್‌ಎಲ್ ನೌಕರರಂತೆ ಕಾಣಿಸುವ ವಿಶೇಷ ನೀಲಿ ಬಣ್ಣದ ಸಮವಸ್ತ್ರವನ್ನು ಹೊಲಿಸಿಕೊಂಡು ಧರಿಸುತ್ತಿದ್ದರು. ಟೆಲಿಫೋನ್ ಎಕ್ಸ್‌ಚೇಂಜ್‌ಗಳು ಹಾಗೂ ರಸ್ತೆ ಬದಿಯ ಇಂಟರ್ನೆಟ್ ಬಾಕ್ಸ್‌ಗಳ ಬಳಿ ರಿಪೇರಿ ನೆಪದಲ್ಲಿ ಹೋಗಿ, ಕಳ್ಳತನದ ಕೆಲಸವನ್ನು ನಡೆಸುತ್ತಿದ್ದರು. ಪಿಕಾಸಿ, ಸುತ್ತಿಗೆ, ಸ್ಕ್ರೂಡ್ರೈವರ್ ಮತ್ತು ಕಟ್ಟರ್ ಬಳಸಿ ಕಬ್ಬಿಣದ ಕಂಬಗಳನ್ನು ಒಡೆದು ಅದರೊಳಗಿನ ತಾಮ್ರದ ತಂತಿ ಹಾಗೂ ಬೆಲೆಬಾಳುವ ಮಾಡ್ಯೂಲ್‌ಗಳನ್ನು ಕದ್ದೊಯ್ಯುತ್ತಿದ್ದರು.
ಕಳ್ಳತನಕ್ಕಾಗಿ ವಿಶೇಷ ಯೋಜನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಈ ಗ್ಯಾಂಗ್, ವಿಮಾನದ ಮೂಲಕ ಒಂದೊಂದು ನಗರಕ್ಕೆ ತೆರಳಿ ಗುರಿ ಸಾಧಿಸುತ್ತಿತ್ತು. ಬೆಂಗಳೂರಿಗೆ ಬಂದಿಳಿದ ನಂತರ ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ ಮತ್ತು ಯಶವಂತಪುರ ಪ್ರದೇಶಗಳಲ್ಲಿ ಜುಲೈ 17 ಮತ್ತು 19ರಂದು ಸರಣಿ ಕಳ್ಳತನ ನಡೆಸಿದ್ದಾರೆ. ಕದ್ದ ವಸ್ತುಗಳನ್ನು ಸುಲಭವಾಗಿ ಪತ್ತೆಯಾಗದಂತೆ ರೈಲು ಮೂಲಕ ಬೇರೆ ರಾಜ್ಯಗಳಿಗೆ ಸಾಗಿಸುತ್ತಿದ್ದರು.
ಸತತ ಕಳ್ಳತನದ ಹಿನ್ನೆಲೆ ಬಿಎಸ್‌ಎನ್‌ಎಲ್ ಸಿಬ್ಬಂದಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ಕಾರಿ ಆಸ್ತಿಗೆ ಹಾನಿ ಮಾಡಿ ಭಾರೀ ನಷ್ಟ ಉಂಟುಮಾಡುತ್ತಿದ್ದ ಈ ‘ಫ್ಲೈಯಿಂಗ್ ಕಳ್ಳರ’ ಬಂಧನದಿಂದ ಬಿಎಸ್‌ಎನ್‌ಎಲ್ ಇಲಾಖೆ ನಿಟ್ಟುಸಿರು ಬಿಟ್ಟಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.