ಪ್ರವಾಹದಿಂದ ಸಂಕಷ್ಟದಲ್ಲಿರುವ ಶ್ರೀಲಂಕಾಗೆ ನೆರವು ಕೊಂಡೊಯ್ಯಲು ಪಾಕಿಸ್ತಾನ ತನ್ನ ವಿಮಾನಗಳಿಗೆ ಭಾರತೀಯ ವಾಯುಪ್ರದೇಶ ಬಳಕೆಗೆ ಅನುಮತಿ ಕೇಳಿದ್ದನ್ನು ಭಾರತ ನಿರಾಕರಿಸಿದೆ ಎಂಬ ವರದಿಗಳನ್ನು ನವದೆಹಲಿಯ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಪಾಕಿಸ್ತಾನವು ಡಿಸೆಂಬರ್ 1 ರಂದು ಮಧ್ಯಾಹ್ನ 1 ಗಂಟೆಗೆ (IST) ಗಗನಪಥ ಬಳಕೆಗೆ ಅಧಿಕೃತ ಮನವಿ ಸಲ್ಲಿಸಿತ್ತು.
ಮಾನವೀಯ ನೆರವಿನ ವಿಷಯ ಎಂದು ಪರಿಗಣಿಸಿ, ಭಾರತ ಸರ್ಕಾರ ಅದೇ ದಿನ ಸಂಜೆ 5 ಗಂಟೆಗೆ (IST) ಈ ಮನವಿಯನ್ನು ಒಪ್ಪಿಕೊಂಡಿತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಭಾರತೀಯ ವಿಮಾನಗಳಿಗೆ ಬಂದ್ ಮಾಡಿದ್ದರೂ, ಭಾರತವು ಇದನ್ನು ಮಾನವೀಯ ಕಾರಣಗಳ ಆಧಾರದ ಮೇಲೆ ಅನುಮೋದಿಸಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನದ ಕೆಲವು ಮಾಧ್ಯಮಗಳು ತಪ್ಪು ಮಾಹಿತಿ ಹಬ್ಬಿಸುತ್ತಿದ್ದು, ಅವರ ಆರೋಪಗಳಿಗೆ ಯಾವುದೇ ನಿಜವಾದ ಆಧಾರವಿಲ್ಲ ಎಂದು ಭಾರತೀಯ ವಲಯಗಳು ಟೀಕಿಸಿವೆ.