ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ (Petrol, Diesel Price Hike) ಕುರಿತು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar), ಇದು “ಮೋದಿ ಸರ್ಕಾರದ ಜನರಿಗೆ ನೀಡಿದ ಉಡುಗೊರೆ” ಎಂದು ವ್ಯಂಗ್ಯವಾಡಿದರು. ಇಂಧನ ದರ ನಿಯಂತ್ರಣದಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಪ್ರಧಾನಿಯವರ ವಿದೇಶಾಂಗ ನೀತಿ ದುರ್ಬಲವಾಗಿರುವುದರಿಂದಲೇ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ನಷ್ಟವಾಗುತ್ತಿದೆ ಎಂದರು. ಸಾಮಾನ್ಯ ಜನರು ದುಡಿದು ಜೀವನ ಸಾಗಿಸುತ್ತಿದ್ದಾರೆ, ಆದರೆ ಬೆಲೆ ಏರಿಕೆಯಿಂದ ಅವರ ಬದುಕು ಸಂಕಷ್ಟಕ್ಕೀಡಾಗಿದೆ ಎಂದು ಕಿಡಿಕಾರಿದರು. ಚಿನ್ನ ಖರೀದಿಸಬೇಡಿ, ಎಣ್ಣೆ ಬಳಕೆ ಕಡಿಮೆ ಮಾಡಿ ಎಂಬ ಸಲಹೆಗಳು ವಾಸ್ತವಿಕತೆಯಿಂದ ದೂರವಾಗಿವೆ. ಮಾಂಗಲ್ಯ ಸರ ಮಹಿಳೆಯರ ಭಾವನೆಗೆ ಸಂಬಂಧಿಸಿದ ವಿಷಯ, ಅದನ್ನೂ ತೆಗೆದುಕೊಳ್ಳಬೇಡಿ ಎನ್ನುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಡದಿ ಟೌನ್‌ಶಿಪ್ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ನಾನು ಬಿಡದಿಗೆ ಖಂಡಿತ ಹೋಗುತ್ತೇನೆ. ರೈತರು ಪ್ರತಿಭಟನೆ ನಡೆಸಿದರೂ, ಘೋಷಣೆ ಕೂಗಿದರೂ ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಕುಮಾರಸ್ವಾಮಿ ಆರಂಭಿಸಿದ್ದ ಯೋಜನೆಯನ್ನೇ ನಾನು ಮುಂದುವರಿಸುತ್ತಿದ್ದೇನೆ. ದಿನಾಂಕ ನಿಗದಿ ಮಾಡಿದರೆ ಸಾರ್ವಜನಿಕ ಚರ್ಚೆಗೆ ಕೂಡ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ತಮ್ಮ ಹುಟ್ಟುಹಬ್ಬದ ಹಿನ್ನೆಲೆ ನಗರದಲ್ಲಿ ಹಾಕಲಾಗಿರುವ ಬ್ಯಾನರ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಅವನ್ನು ತೆರವುಗೊಳಿಸಲು ಸೂಚನೆ ನೀಡಿದ್ದೇನೆ ಎಂದರು. ನನ್ನ ಜನ್ಮದಿನದ ಹೆಸರಿನಲ್ಲಿ ಬ್ಯಾನರ್ ಹಾಕುವುದು ತಪ್ಪು. ಬ್ಯಾನರ್ ಅಳವಡಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ ಎಂದು ಹೇಳಿದರು. ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಬ್ಯಾನರ್ ಹಾಕಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ನಾಯಕತ್ವ ಬದಲಾವಣೆ ಅಥವಾ ಹೈಕಮಾಂಡ್‌ನಿಂದ ಸಿಗುವ ‘ಸಿಹಿ ಸುದ್ದಿ’ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೇ ಅಲ್ಲಿಂದ ತೆರಳಿದರು.