ರಾಮನಗರ: 15 ಅಡಿ ಎತ್ತರದ ಕಾಂಪೌಂಡ್ ದಾಟಿ ಮೇಕೆ, ಕುರಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದ ಚಿರತೆ (Leopard) ಕೊನೆಗೂ ಬೋನಿಗೆ ಸೆರೆಯಾದ ಘಟನೆ ಕನಕಪುರ (Kanakapura) ತಾಲೂಕಿನ ಮಳಗಾಳು ಗ್ರಾಮದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಗ್ರಾಮದ ರೈತ ರಾಕೇಶ್ ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿ ಮತ್ತು ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಎರಡು ಕುರಿ ಹಾಗೂ ಎರಡು ಮೇಕೆಗಳನ್ನು ಕೊಂದು ಹಾಕಿತ್ತು. 15 ಅಡಿ ಎತ್ತರದ ಕಾಂಪೌಂಡ್ ಇದ್ದರೂ ಚಿರತೆ ಕೊಟ್ಟಿಗೆಯೊಳಗೆ ನುಗ್ಗಿದ್ದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಇದಾದ ಬಳಿಕ ಶುಕ್ರವಾರ ಮಳಗಾಳು ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಬೋನು ಅಳವಡಿಸಿತ್ತು. ಇಂದು ಬೆಳಗ್ಗೆ ಬೋನಿಗೆ ಚಿರತೆ ಸೆರೆಯಾಗಿದ್ದು, ಇದರೊಂದಿಗೆ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.