
ಗಾನ ಗೋಷ್ಠಿಯಲ್ಲಿ ಭಜನೆ ಪ್ರಕಾರ ಎಂಬುದು ದೇವರನಾಮ ಮತ್ತು ದೇವ ಕೀರ್ತನೆಗಳನ್ನು ಹಾಡುತ್ತಾ ದೇವರನ್ನು ಭಜಿಸುವ ಧಾರ್ಮಿಕ ಪ್ರಧಾನವಾದದ್ದಾಗಿದೆ. ತತ್ವಪದ ಗಾಯನವು ಬದುಕಿನ ಸಾರಸತ್ವ ಸಾರುವ ಕವಿತೆಗಳನ್ನು ಹಾಡುವ ಅಲೌಕಿಕ ಅಥವಾ ಅನುಭಾವ ಅಥವಾ ಅಧ್ಯಾತ್ಮ ಪ್ರಧಾನವಾದದ್ದಾಗಿದೆ. ಭಜನೆ ಪದಗಳಲ್ಲಿ ಮನುಷ್ಯನು ತನ್ನನ್ನು ದೇವರ ಅಧೀನದಲ್ಲಿರಿಸಿ ತಾನು ಭಕ್ತನೆಂದು, ದೇವರು ಸಕಲವನ್ನು ಸೃಷ್ಟಿಸಿರುವ ಸೃಷ್ಟಿ ನಿಯಾಮಕನೂ ಮತ್ತು ಅವನು ಸೃಷ್ಟಿಸಿದ ಸಕಲವನ್ನೂ ಸಲಹಿ ಕಾಯುವ ಸೃಷ್ಟಿ ಪರಿಪಾಲಕನೂ ಆಗಿರುತ್ತಾನೆಂದು, ದೇವರನ್ನು ಒಡೆಯನನ್ನಾಗಿಯೂ ಮನುಷ್ಯನಾದ ತನ್ನನ್ನು ದೀನ ಸೇವಕನನ್ನಾಗಿಯೂ ಚಿತ್ರಿಸಲಾಗುತ್ತದೆ.
ತತ್ವಪದಗಳು ಗುರುಸ್ಮರಣೆ ಮತ್ತು ಅಧ್ಯಾತ್ಮಿಕ ಅನುಭೂತಿ ಪ್ರಧಾನವಾಗಿರುವುದರಿಂದಾಗಿ, ಮನುಷ್ಯನಾಗಿ ತನ್ನ ಕಣ್ಣೆದುರಿನಲ್ಲಿ ಗುರುಸ್ಥಾನದಲ್ಲಿರುವ ಮನುಷ್ಯನೇ ದೇವರಿಗಿಂತ ಅಧಿಕನೆಂದು, ಬದುಕಿನ ಸತ್ಯಗಳನ್ನು ತಿಳಿಸಿಕೊಟ್ಟು ಪಾರಮಾರ್ಥಿಕ ಅರಿವು ನೀಡುವ ಗುರುವೇ ತಂದೆ-ತಾಯಿಯಾದ ಕಾರಣ, ಲೌಕಿಕ ಬದುಕಿನಲ್ಲಿ ಅಂದರೆ ಇಹದ ಕೌಟುಂಬಿಕ ಬದುಕಿನಲ್ಲಿ ತಂದೆ- ತಾಯಿಗಳೆಂಬುವವರು ಅಂಡಪಿಂಡೋದ್ಭವದ ದೇಹ ಸೃಷ್ಟಿಗೆ ಕಾರಣರಾದ್ದರಿಂದ, ಹಡೆದ ದೇಹದೊಳಗೆ ವಸ್ತಿ ಮಾಡುವ ಗುರುವು ಮುಕ್ತಿಮಾರ್ಗದಲ್ಲಿ ದೇಹವನ್ನು ಕರೆದೊಯ್ಯುವ ಕಾರಣ ಗುರುವಿನ ಪರಮಪದವೇ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ತತ್ವಪದಗಳು ಜನಸಾಮಾನ್ಯರು ತಾಳಿದ ಲೋಕದೃಷ್ಟಿಯಲ್ಲಿ ಭವ ಬಂಧನಗಳಿಂದ ಮತ್ತು ಭವಕ್ಲೇಶಗಳಿಂದ ಮನುಷ್ಯನನ್ನು ಪಾರು ಮಾಡುವ ಪದಗಳಾಗಿವೆ. ಇಲ್ಲಿ ದೇವರು ಧರ್ಮ ಜಾತಿ ಲಿಂಗ ಯಾವುದೂ ಮುಖ್ಯವಲ್ಲ.
ಭಜನೆ ಪದಗಳು ತತ್ವಪದಗಳಂತೆ ಮನುಷ್ಯನೇ ಶ್ರೇಷ್ಠವೆಂದು ಮನುಷ್ಯನ ಆತ್ಮೋನ್ನತಿಯನ್ನು ಕುರಿತು ಹಾಡಲಾರವು. ಭಜ ಅಂದರೆ ಸೇವಾಕರ್ತ, ದಾಸ, ಭಕ್ತ, ಭಟ್ಟಂಗಿ ಎಂದರ್ಥ. ಭಜಿಸು ಅಂದರೆ ಕೀರ್ತಿಸು, ಹೊಗಳು, ಸ್ತುತಿಸು ಎಂದರ್ಥ. ಭಜರಂಗಿ ಅಂದರೆ ಹೊಗಳು ಭಟ್ಟ. ಭಜನೆ ಮಾಡುವುದು ಹೊಗಳು ಭಟ್ಟರ ಅಥವಾ ಭಟ್ಟಂಗಿ ಭಕ್ತರ ಮೇಳ. ಅದೊಂದು ಗಾನ ಕೀರ್ತನಾ ಭಕ್ತಗೋಷ್ಠಿ. ಭಜನೆ ಮಾಡಲು ರೂಢಿಯಂತೆ ತಾಳ, ಶೃತಿ, ಮೃದಂಗ, ತಬಲ, ಮದ್ದಳೆ, ಡಿಕ್ಕಿ, ಹಾರ್ಮೋನಿಯಂ ಮುಂತಾದ ವಾದ್ಯಗಳನ್ನು ಬಳಸಿ ಭಕ್ತಗಣವು ಸಾಮೂಹಿಕ ಹಾಡುಗಾರಿಕೆ ನಡೆಸುತ್ತದೆ. ಇದನ್ನು ನಾವು ಭಜನೆ ಎಂದು ಕರೆಯುತ್ತೇವೆ. ಇದು ನಿಂದಾಸ್ತುತಿ ರಹಿತವಾದ ಭಟ್ಟಂಗಿ ನೆಲೆಯ ಹಾಡುಗಳನ್ನು ಬರೆದು ಹಾಡುವ ಸಂಗೀತ ಪ್ರಧಾನ ಹಿನ್ನೆಲೆಯಲ್ಲಿ ಬೆಳೆದುಬಂದ ಕಾವ್ಯ ಪ್ರಕಾರವಾಗಿದೆ.
ಭಜನೆಯು ತತ್ವ ಪದವಲ್ಲ. ತತ್ತ್ವಪದವು ಭಜನೆಯೂ ಅಲ್ಲ. ಕೆಲವೊಮ್ಮೆ ಎರಡನ್ನೂ ಸಂಕರಗೊಳಿಸಿ ಹಾಡುವ ಬಗೆಯನ್ನೂ ನಾವು ನೋಡಿದ್ದೇವೆ. ಭಜನೆ ಪದಗಳಾಗಿರಲಿ ಅಥವಾ ತತ್ವಪದಗಳಾಗಿರಲಿ ನೀತಿ ಬೋಧಕ ಪದಗಳಾಗಿವೆ. ಈಗ ತತ್ತ್ವಪದವನ್ನೂ ಭಜನೆಗೆ ಬಳಸುವ ಮತ್ತು ಭಜನೆ ಪದಗಳನ್ನು ತತ್ವಮೇಳದೊಂದಿಗೆ ಬಳಸುವ ವಿದ್ಯಮಾನಗಳು ಸಹಜ ಪ್ರಕ್ರಿಯೆಗಳಾಗಿ ಕಾಣಿಸುತ್ತಿವೆ. ಪುರಂದರದಾಸ, ಕನಕದಾಸ, ವಿಜಯದಾಸ ಇಂತಹ ದಾಸಶ್ರೇಷ್ಠರ ಸಂಗೀತ ಪ್ರಧಾನ ಭಜನೆ ಪದಗಳನ್ನು ತತ್ವಮೇಳ ಮತ್ತು ಭಜನೆಗಳಲ್ಲಿ ವ್ಯತ್ಯಾಸಗಳನ್ನರಿಯದೆ ಬಳಸಲಾಗುತ್ತಿದೆ.
ತತ್ವಪದ ಗಾಯನ ಮತ್ತು ಭಜನೆ ಎನ್ನುವುದು ಮೇಳ. ಭಜಿಸು ಎಂಬುವ ಪದದಿಂದ ಭಜನೆ ಎಂಬ ಪದ ಚಾಲ್ತಿಗೆ ಬಂದಿದೆ. ಭಜಿಸು ಎಂದರೆ ಆರಾಧಿಸು, ಸ್ತುತಿಸು, ಕೀರ್ತಿಸು, ಸೇವೆ ಮಾಡು, ಹೊಗಳು ಎಂದು ಸಾಂದರ್ಭಿಕ ಅರ್ಥಗಳಿವೆ. ದೇವರ ಸ್ತುತಿ ಗೀತೆಗಳನ್ನು ವಾದ್ಯಸಹಿತವಾಗಿ ತನ್ಮಯತೆಯಿಂದ ಹಾಡುವಂತಹ ಭಜನೆ ಮೇಳದಲ್ಲಿ ಹಾರ್ಮೋನಿಯಂ, ತಾಳ, ಮದ್ದಳೆ, ಮೃದಂಗ, ಡಪ್ಪು ಅಥವಾ ಡಿಕ್ಕಿ, ತಬಲಾ, ಕಂಜರ ಮುಂತಾದ ವಾದ್ಯಗಳು ಹಾಗೂ ಹಾಡುಗಾರರು ಇರುತ್ತಾರೆ. ಇಲ್ಲಿ ಭಕ್ತರು, ದೇವರನಾಮ, ದೇವ ಕೀರ್ತನೆ, ಪ್ರಾರ್ಥನೆಗಳು ಸೇರಿವೆ. ಭಜನೆ ಪದವನ್ನು ಸಾರ್ವಜನಿಕವಾಗಿ ಒಬ್ಬರೇ ಹಾಡುವ ರೂಢಿ ಅಷ್ಟಾಗಿ ಇರುವುದಿಲ್ಲ ಹಲವಾರು ಭಕ್ತರು ಗುಂಪುಗೂಡಿದಾಗಲೇ ಭಜನಾವಳಿಯಾಗಿ ಸಂಗೀತವು ಪಾಂಗಿತವಾಗಿ ರುಚಿಸುತ್ತದೆ.
ಬದುಕಿನ ಸಾರಸತ್ವವನ್ನು ಮತ್ತು ಜನಸಾಮಾನ್ಯರ ಲೋಕದೃಷ್ಟಿಯನ್ನು ಗೊಡ್ಡು ಧಾರ್ಮಿಕತೆಯಿಂದ ಬಿಡಿಸಿಕೊಂಡು ಜನರಿಗೆ ಸತ್ಯಗಳನ್ನು ಬೆಡಗಿನ ರಚನೆಗಳಿಂದಲೂ, ಜನಬದುಕಿನ ರೂಪಕನಿಷ್ಠ ನುಡಿಗಳಿಂದಲೂ ಸಾರುವ ತತ್ವಪದ ಮೇಳದಲ್ಲಿ ವಿಶೇಷವಾಗಿ ತಂಬೂರಿ, (ಏಕನಾಥ ಅಥವಾ ಏಕದಾರಿ) ತಾಳ, ಡಿಕ್ಕಿ ಅಥವಾ ಡಪ್ಪು, ಚಿಟಿಕೆ ಇರುತ್ತವೆ. ಗುಂಪಿನಲ್ಲಿ ಅಥವಾ ಇಬ್ಬರು ಅಥವಾ ಒಬ್ಬರೇ ಎಡಗೈಲಿ ತಂಬೂರಿ ತಂತಿ ಮೀಟುತ್ತಾ ಬಲಗೈಲಿ ಚಿಟಿಕೆ ನುಡಿಸುತ್ತಾ ಎದೆಯ ತತ್ತ್ವಪದಗಳನ್ನು ಹಾಡುವ ಸಂಪ್ರದಾಯವೂ ಇದೆ. ಗುರುವನ್ನು ಮಹತ್ವದ ಸಂಗತಿಯನ್ನಾಗಿ ಸ್ವೀಕರಿಸುತ್ತಲೇ ಗುರುವಿನ ಗುರುತನ್ನೂ ಅಳಿಸಿ ಹಾಕಲು ಮತ್ತು ಗುರುವಿನ ಅರಿವೇ ಮುಖ್ಯವೆಂದು ಕರೆ ಕೊಡುವ ತತ್ತ್ವಪದಗಳು, ಬದುಕಿನ ನೀತಿ, ಆಚಾರಗಳನ್ನು ಮತ್ತು ನೀತಿಗೆಟ್ಟು ಹೊಲಬುದಪ್ಪಿ ನಡೆಯುವ ಡಾಂಬಿಕತೆಯನ್ನೂ ಬಯಲು ಮಾಡುತ್ತವೆ.
ದೇವರು ಧರ್ಮ ಗುರು ಶಿಷ್ಯ ಭಕ್ತ ಒಡೆಯ ಸೇವಕ ಮುಂತಾದ ರೂಢಿಗತ ಸಂಗತಿಗಳನ್ನು ಹೊತ್ತಾಡಿ ಹೊಗಳುವುದಕ್ಕಿಂತಲೂ ಇವುಗಳನ್ನೆಲ್ಲಾ ಹಾದಿಬೀದಿಗಳಲ್ಲಿ ಚೆದುರಿ ಚೆಲ್ಲಾಪಿಲ್ಲಿ ಈಡಾಡಿಕೊಂಡು, ಒಟ್ಟಂದವಾಗಿ ಹೊಲೆದುಕೊಂಡು ಅವುಗಳೆದುರು ಜಂಗಿಕುಸ್ತಿ ತೋರಿಸಿಯೂ ಕುಸ್ತಿಪಟ್ಟುಗಳನ್ನು ತಿಳಿದಿರದ ಒಬ್ಬ ಸಾಮಾನ್ಯ ದಾರಿಹೋಕನ ಆತ್ಮಸಂಗಾತದ ಮಾತುಗಳಂತೆ ನನಗೆ ತತ್ವಪದಗಳು ಕಾಣಿಸುತ್ತಿವೆ. ಸಾಹಿತ್ಯಾಭ್ಯಾಸ ಮತ್ತು ರಸಾಸ್ವಾದಗಳ ದೃಷ್ಟಿಯಿಂದ ಭಜನೆ ಪದಗಳು ಮತ್ತು ತತ್ವಪದಗಳು ನನಗೆ ಎರಡೂ ಮುಖ್ಯವಾಗಿ ಕಾಣಿಸುತ್ತವೆ.