ಗದಗ, ಮೇ 12: ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಳ್ಳುತ್ತಿರುವ ನಡುವೆಯೇ, ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಭೂದಾಖಲೆ ಮತ್ತು ನಗರ ಸರ್ವೇ ಕಚೇರಿ ಕಳೆದ 8 ತಿಂಗಳಿನಿಂದ ಕತ್ತಲಲ್ಲೇ ಕಾರ್ಯನಿರ್ವಹಿಸುತ್ತಿದೆ. ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿಯಾಗದ ಹಿನ್ನೆಲೆ ಹೆಸ್ಕಾಂ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಕೆಲಸ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ.
ಸುಮಾರು 3 ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ಕಚೇರಿಯ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಂಟು ತಿಂಗಳಿನಿಂದ ವಿದ್ಯುತ್ ಇಲ್ಲದಿದ್ದರೂ ಸಮಸ್ಯೆ ಪರಿಹಾರವಾಗದೇ ಉಳಿದಿದ್ದು, ಸಿಬ್ಬಂದಿ ಕತ್ತಲಲ್ಲೇ ದಾಖಲೆಗಳ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಾಲೂಕು ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ಲಕ್ಷ್ಮೇಶ್ವರದಲ್ಲಿ ಮೂಲ ಸೌಲಭ್ಯಗಳ ಕೊರತೆ ತೀವ್ರವಾಗಿ ಕಾಣಿಸುತ್ತಿದೆ. ಕಚೇರಿಯಲ್ಲಿ ಕೇವಲ ಇಬ್ಬರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಜಮೀನು ಹಾಗೂ ಆಸ್ತಿ ಅಳತೆ, ಗಡಿ ಗುರುತು, ಸರ್ವೇ ನಕ್ಷೆ ತಯಾರಿ, ಹಳೆಯ ದಾಖಲೆ ನಿರ್ವಹಣೆ, ಆಸ್ತಿ ಕಾರ್ಡ್ ವಿತರಣೆ ಸೇರಿದಂತೆ ಹಲವು ಪ್ರಮುಖ ಕೆಲಸಗಳು ನಡೆಯುತ್ತಿವೆ.
ಸರ್ಕಾರ ಭೂದಾಖಲೆ ಹಾಗೂ ಸರ್ವೇ ನಕ್ಷೆಗಳ ಡಿಜಿಟಲೀಕರಣದ ಬಗ್ಗೆ ಘೋಷಣೆ ಮಾಡುತ್ತಿದ್ದರೂ, ಕಚೇರಿಯಲ್ಲಿ ಇನ್ನೂ ಕೈಬರಹದ ನಕ್ಷೆಗಳನ್ನೇ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮರ್ಪಕ ಡಿಜಿಟಲ್ ವ್ಯವಸ್ಥೆ ಹಾಗೂ ಕಂಪ್ಯೂಟರ್ ಸೌಲಭ್ಯಗಳ ಕೊರತೆಯಿಂದ ಸಿಬ್ಬಂದಿ ತಮ್ಮ ವೈಯಕ್ತಿಕ ಮೊಬೈಲ್‌ಗಳಲ್ಲೇ ಅರ್ಜಿಗಳನ್ನು ಪರಿಶೀಲಿಸಿ ಮಾಹಿತಿ ವೀಕ್ಷಿಸಬೇಕಾದ ಪರಿಸ್ಥಿತಿ ಇದೆ ಎನ್ನಲಾಗಿದೆ.
ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.