ಮಡಿಕೇರಿ: ಅರಣ್ಯ ಪ್ರದೇಶದ ರಸ್ತೆಗಳಲ್ಲಿ (Forest Road) ವಾಹನ ಚಲಾಯಿಸುವಾಗ ಹೆಚ್ಚು ಜಾಗ್ರತೆ ಅಗತ್ಯ. ಯಾಕೆಂದರೆ, ಕಾಡಿನ ಜೀವಿಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಕೆಲವೊಮ್ಮೆ ಇಂತಹ ರಸ್ತೆಗಳಲ್ಲಿ ಅಪರೂಪದ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಇದೀಗ ಅಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರೀ ಗಾತ್ರದ ಹೆಬ್ಬಾವು (Python) ರಸ್ತೆ ಮಧ್ಯೆ ಕಾಣಿಸಿಕೊಂಡಿದೆ. ಸಜ್ಜಳ್ಳಿ – ಯಡವನಾಡು ಸಂಪರ್ಕ ರಸ್ತೆಯ ಚೈನ್‌ಗೇಟ್ ಬಳಿ ರಾತ್ರಿ ವೇಳೆ ಹೆಬ್ಬಾವು ರಸ್ತೆ ದಾಟುತ್ತಿದ್ದ ದೃಶ್ಯ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಯಡವಾರೆ ಗ್ರಾಮದ ಕಾಫಿ ಬೆಳೆಗಾರ ಪ್ರಕಾಶ್ ಬೆಳ್ಳಿಯಪ್ಪ ಅವರು ಕುಟುಂಬದವರೊಂದಿಗೆ ರಾತ್ರಿ ಸುಮಾರು 9 ಗಂಟೆಗೆ ಕುಶಾಲನಗರದಿಂದ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸುಮಾರು 12 ರಿಂದ 13 ಅಡಿ ಉದ್ದದ ಹೆಬ್ಬಾವು ನಿಧಾನವಾಗಿ ರಸ್ತೆ ದಾಟಿ ಕಾಡಿನೊಳಗೆ ಸೇರಿಕೊಂಡಿದೆ. ಪ್ರಕಾಶ್ ಅವರು ಈ ಅಪರೂಪದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸುತ್ತಮುತ್ತಲಿನ ಕಾಫಿ ತೋಟದ ಕಾರ್ಮಿಕರು ಹಾಗೂ ಮಾಲೀಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.