ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಭಾರತದಲ್ಲಿ ಎಲ್‌ಪಿಜಿ (LPG) ಬಳಕೆ ಶೇ.13ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ. ಯುದ್ಧ ಪರಿಸ್ಥಿತಿಯಿಂದ ಪೂರೈಕೆ ಸರಪಳಿಯಲ್ಲಿ ಅಡಚಣೆ ಉಂಟಾಗಿದ್ದು, ಇದರಿಂದ ಬಳಕೆ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ.
ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಎಲ್‌ಪಿಜಿ ಬಳಕೆ ಶೇ.13ರಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2.729 ದಶಲಕ್ಷ ಟನ್ ಎಲ್‌ಪಿಜಿ ಬಳಕೆಯಾಗಿದ್ದರೆ, ಈ ವರ್ಷದ ಮಾರ್ಚ್‌ನಲ್ಲಿ ಅದು 2.379 ದಶಲಕ್ಷ ಟನ್‌ಗೆ ಇಳಿದಿದೆ.
ಪೆಟ್ರೋಲಿಯಂ ಪ್ಲಾನಿಂಗ್ ಅಂಡ್ ಅನಾಲಿಸಿಸ್ ಸೆಲ್ (PPAC) ನೀಡಿರುವ ಅಂಕಿಅಂಶಗಳಿಂದ ಈ ಮಾಹಿತಿ ಬಹಿರಂಗವಾಗಿದೆ. ದೇಶವು ತನ್ನ ಒಟ್ಟು ಎಲ್‌ಪಿಜಿ ಅವಶ್ಯಕತೆಯ ಸುಮಾರು ಶೇ.60ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿ ಮಾರ್ಗದ ಮೂಲಕ ಆಗಮಿಸುತ್ತಿದ್ದ ಎಲ್‌ಪಿಜಿ, ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆಯಲ್ಲಿ ಹಡಗು ಸಂಚಾರದಲ್ಲಿ ತೊಂದರೆ ಎದುರಿಸುತ್ತಿದೆ. ಇದರಿಂದ ಪೂರೈಕೆ ಸರಪಳಿಯಲ್ಲಿ ನಿರಂತರ ವ್ಯತ್ಯಯ ಉಂಟಾಗಿದೆ.
ಎಲ್‌ಪಿಜಿ ಕೊರತೆಯ ಪರಿಣಾಮ ಗೃಹೇತರ ವಿಭಾಗಗಳ ಮೇಲೆ ಹೆಚ್ಚು ತೀವ್ರವಾಗಿ ಕಾಣಿಸಿಕೊಂಡಿದೆ. ವಾಣಿಜ್ಯ ಬಳಕೆದಾರರಿಗೆ ಎಲ್‌ಪಿಜಿ ಮಾರಾಟವು ಸುಮಾರು ಶೇ.48ರಷ್ಟು ಕುಸಿದಿದ್ದು, ಬೃಹತ್ ಪ್ರಮಾಣದ ಎಲ್‌ಪಿಜಿ ಬಳಕೆ ಶೇ.75.5ರಷ್ಟು ತೀವ್ರ ಇಳಿಕೆ ದಾಖಲಿಸಿದೆ.