ಕಾರವಾರ: ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ನಡೆದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಭಾನುವಾರ 10 ಮೃತದೇಹಗಳು ಪತ್ತೆಯಾಗಿದ್ದರೆ, ಸೋಮವಾರ ಮತ್ತೊಂದು ಶವ ಪತ್ತೆಯಾಗಿದೆ. ಮೃತರನ್ನು ಮಾದೇವ್ ನಾಯ್ಕ್ ಎಂದು ಗುರುತಿಸಲಾಗಿದೆ. ನದಿಯಲ್ಲಿ ನಾಪತ್ತೆಯಾಗಿದ್ದವರಿಗಾಗಿ ಇಂದು ಬೆಳಿಗ್ಗೆ 8 ಗಂಟೆಯಿಂದ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ತಟ್ಟೆಹಕ್ಕಲು ನದಿಯ ಅಳವೆಯಲ್ಲಿ ಮಾದೇವ್ ನಾಯ್ಕ್ ಅವರ ಮೃತದೇಹ ಪತ್ತೆಯಾಯಿತು. ನೀರಿನಲ್ಲಿ ಕಾಣೆಯಾಗಿದ್ದವರ ಶವಗಳನ್ನು ಹುಡುಕಲು ಮುಳುಗು ತಜ್ಞರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಪ್ರತ್ಯೇಕ ತಂಡಗಳಾಗಿ ಶೋಧ ಕಾರ್ಯ ನಡೆಸಿದ್ದು, ಸ್ಥಳೀಯ ಮೀನುಗಾರರೂ ಸಹಕರಿಸಿದರು. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಕಾರ್ಯಾಚರಣೆ ಸುಗಮವಾಗಿ ನಡೆಯಿತು.