ರಾಯಚೂರು: ಬಿಸಿಲಿನ ಕಿಡಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ (Raichuru) ಜಿಲ್ಲೆಯಲ್ಲಿ ಬೀಯರ್ ಹಾಗೂ ಲಿಕ್ಕರ್ ವ್ಯಾಪಾರ ಭಾರೀ ಏರಿಕೆ ಕಂಡಿದೆ. ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ 13 ಸಾವಿರಕ್ಕೂ ಹೆಚ್ಚು ಬಾಕ್ಸ್ ಬೀಯರ್ ಮಾರಾಟವಾಗಿದೆ. ಬಿಸಿಲಿನಿಂದ ತಂಪು ಹುಡುಕುವ ಜನರು ಶೀತಪಾನೀಯಗಳತ್ತ ಮುಖ ಮಾಡುತ್ತಿದ್ದರೆ, ಮದ್ಯಪ್ರಿಯರು ಬೀಯರ್‌ಗೆ ಮೊರೆ ಹೋಗಿದ್ದಾರೆ. ಇದರಿಂದ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಉತ್ತಮ ಆದಾಯ ಲಭಿಸುತ್ತಿದೆ. ಮಾರ್ಚ್‌ನಲ್ಲಿ 82,151 ಬಾಕ್ಸ್ ಬೀಯರ್ ಮಾರಾಟವಾಗಿದ್ದರೆ, ಏಪ್ರಿಲ್‌ನ 25 ದಿನಗಳಲ್ಲಿ ಕೆಎಸ್‌ಬಿಸಿಎಲ್ 95,319 ಬಾಕ್ಸ್ ಪೂರೈಸಿದೆ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ಬಾರಿ 10 ಸಾವಿರಕ್ಕೂ ಹೆಚ್ಚು ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಇತ್ತ ಇಂಡಿಯನ್ ಮೇಡ್ ಲಿಕ್ಕರ್‌ಗೂ ಭಾರೀ ಬೇಡಿಕೆ ಇದ್ದು, ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ಬಾರಿ 8 ಸಾವಿರಕ್ಕೂ ಹೆಚ್ಚು ಬಾಕ್ಸ್ ಲಿಕ್ಕರ್ ಮಾರಾಟವಾಗಿದೆ. ಅಲ್ಲದೇ, ಈ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ 16 ಸಾವಿರಕ್ಕೂ ಹೆಚ್ಚು ಬಾಕ್ಸ್ ಲಿಕ್ಕರ್ ಹೆಚ್ಚುವರಿ ಸೇಲ್ ಆಗಿದೆ. ಪರಿಣಾಮವಾಗಿ ಕೆಎಸ್‌ಬಿಸಿಎಲ್ ಗೋದಾಮಿನಲ್ಲಿ ಸ್ಟಾಕ್ ವೇಗವಾಗಿ ಖಾಲಿಯಾಗುತ್ತಿದೆ. ಬೀಯರ್ ಜೊತೆಗೆ ಲಿಕ್ಕರ್ ಕೂಡ ಈ ಬೇಸಿಗೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.