ಬೆಂಗಳೂರು: ಬೈಕ್ ಸವಾರರಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಯರಿಗೆ ಅಸಭ್ಯವಾಗಿ ಅಂಗಾಂಗ ಮುಟ್ಟಿ ವಿಕೃತಿ ಮೆರೆದ ಘಟನೆ ಯಲಹಂಕದಲ್ಲಿ ನಡೆದಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಾವಗಡ ಮೂಲದ ಹರೀಶ್ ಮತ್ತು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ಇಬ್ಬರು ಬೆಂಗಳೂರಿಗೆ ಬಂದು ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದರು.
ಇದೇ ತಿಂಗಳ 22ರಂದು ಯಲಹಂಕದಿಂದ ಬಾಗಲೂರಿಗೆ ತೆರಳುವ ಮುಖ್ಯರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಯುವತಿಯರಿಗೆ ಲೈಂಗಿಕ ಕಿರುಕುಳ ಎಸಗಿದ ಘಟನೆ ನಡೆದಿದೆ. ಆರೋಪಿಗಳ ಈ ಕೃತ್ಯ ಹಿಂಬದಿಯಿಂದ ಬರುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ದಾಖಲಾಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಂಡಿಸಿದ್ದಾರೆ. ತಕ್ಷಣ ಎಚ್ಚೆತ್ತ ಯಲಹಂಕ ಪೊಲೀಸರು ಸ್ವಯಂಪ್ರೇರಿತವಾಗಿ ಸುಮೋಟೊ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.